ಬಸವರಾಜ ಕಟ್ಟೀಮನಿ
ಸರ್ಕಾರಿ ಶಾಲೆಯಲ್ಲಿ ಅಭ್ಯಸಿಸಿದ ಸಾಮಾನ್ಯ ರೈತನ ಮಗನೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ಯಾದಗಿರಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿರುವುದು ಇಡೀ ಜಿಲ್ಲಾದ್ಯಂತ ಪ್ರಜ್ಞಾವಂತ ನಾಗರಿಕರು ಹುಬ್ಬೇರಿಸುವಂತೆ ಮಾಡಿದೆ.
ಗುರುವಾರ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಹುಣಸಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶರಣಬಸವ ಕುರಿ ಒಟ್ಟು 625 ಕ್ಕೆ 620 ಅಂಕ (ಶೇ.99.2) ಪಡೆಯುವದರ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.ತಾಲೂಕಿನ ಗೆದ್ದಲಮಾರಿ ಗ್ರಾಮದ ಶರಣಬಸವನ ತಂದೆ ಭೀಮಣ್ಣ ಕುರಿ ಅವರು ತಮ್ಮ ಸ್ವಂತ ಎರಡು ಎಕರೆ ಜಮೀನಿನಲ್ಲಿ ದುಡಿದು ಮಗನನ್ನು ಓದಿಸುತ್ತಿದ್ದಾರೆ. ಸ್ವಗ್ರಾಮ ಗೆದ್ದಲಮಾರಿ ಗ್ರಾಮದಲ್ಲಿ 1 ನೇ ತರಗತಿಯಿಂದ 6 ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿದ ಶರಣಬಸವ ನಂತರ ಹುಣಸಗಿ ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು ವತಿಯಿಂದ ನಡೆದ "ತಪಸ್ " ಪರೀಕ್ಷೆಯ ಮೂರು ಹಂತಗಳಲ್ಲೂ ಉತ್ತೀರ್ಣನಾಗಿ, ಸದ್ಯ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರತಿಷ್ಠಿತ ಕಾಲೇಜಿಗೆ ಎರಡು ವರ್ಷಗಳ ಪಿಯುಸಿ ಉಚಿತ ವಸತಿ ಮತ್ತು ಶಿಕ್ಷಣ ಪಡೆಯಲು ಆಯ್ಕೆಯಾಗಿದ್ದಾನೆ.