ಶರಣಬಸವೇಶ್ವರರ ಪುರಾಣ ಮಹಾಮಂಗಲೋತ್ಸವ ಅದ್ಧೂರಿ

KannadaprabhaNewsNetwork |  
Published : Sep 13, 2024, 01:39 AM IST
ಕಾರಟಗಿಯ ಆರಾಧ್ಯ ದೈವ ಶ್ರೀಶರಣಬಸವೇಶ್ವರ ಪುರಾಣ ಮಹಾಮಂಗಲದ ನಿಮಿತ್ಯ ಅಲಂಕೃತಗೊಂಡ ಶ್ರೀಶರಣಬಸವೇಶ್ವರ ಮೂರ್ತಿ | Kannada Prabha

ಸಾರಾಂಶ

ಪಟ್ಟಣದಲ್ಲಿ ಶ್ರಾವಣಮಾಸದ ತಿಂಗಳ ಕಾಲ ನಡೆದ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ೫೦ನೇ ವರ್ಷದ ಪುರಾಣ ಮಹಾಮಂಗಲದ ಪಲ್ಲಕ್ಕಿ ಉತ್ಸವದಲ್ಲಿ ಗುರುವಾರ ಸಾವಿರಾರೂ ಜನ ಭಕ್ತರು ಭಾಗಿಯಾಗಿ ಮಹಾಮಂಗಲೋತ್ಸವ ಅದ್ಧೂರಿಯಿಂದ ನಡೆಯಿತು.

ಅಡ್ಡಪಲ್ಲಕ್ಕಿ ಉತ್ಸವದ ಮರೆವಣಿಗೆ । ಸಾವಿರಾರು ಭಕ್ತರು ಸಾಕ್ಷಿ

ಕನ್ನಡಪ್ರಭ ವಾರ್ತೆ ಕಾರಟಗಿ

ಪಟ್ಟಣದಲ್ಲಿ ಶ್ರಾವಣಮಾಸದ ತಿಂಗಳ ಕಾಲ ನಡೆದ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ೫೦ನೇ ವರ್ಷದ ಪುರಾಣ ಮಹಾಮಂಗಲದ ಪಲ್ಲಕ್ಕಿ ಉತ್ಸವದಲ್ಲಿ ಗುರುವಾರ ಸಾವಿರಾರೂ ಜನ ಭಕ್ತರು ಭಾಗಿಯಾಗಿ ಮಹಾಮಂಗಲೋತ್ಸವ ಅದ್ಧೂರಿಯಿಂದ ನಡೆಯಿತು.

ಮಹಾಮಂಗಲೋತ್ಸವದ ನಿಮಿತ್ತ ಗಂಗೆಸ್ಥಳಕ್ಕೆ ಹೋಗಿ ಬರುವ ಅಡ್ಡಪಲ್ಲಕ್ಕಿ ಉತ್ಸವದ ಮರೆವಣಿಗೆ ನಿರಂತರ ಆರು ಗಂಟೆಗಳ ತನಕ ಅದ್ಧೂರಿಯಾಗಿ ಸಾಗಿ ದೇವಸ್ಥಾನ ತಲುಪಿ ಪೂಜೆ ಧಾರ್ಮಿಕ ವಿಧಾನಗಳನ್ನು ಪೂರೈಸುವ ಮೂಲಕ ಸಂಪನ್ನಗೊಂಡಿತು.

ಬೆಳಗ್ಗೆ ದೇವಸ್ಥಾನದಲ್ಲಿ ಶ್ರೀಶರಣಬಸವೇಶ್ವರ ಮತ್ತು ವೀರಭದ್ರೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪೂಜೆ, ಎಲೆಗಳು, ಅಂಕಾರ ಸಾಂಗವಾಗಿ ನಡೆದವು. ನಂತರ ಹೊರವಲಯದಲ್ಲಿ ಹರಿದ ತುಂಗಭದ್ರ ೩೧ನೇ ವಿತರಣಾ ಕಾಲುವೆಯಿಂದ ಗಂಗೆಸ್ಥಳ ಮೆರವಣಿಗೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಆರಂಭಗೊಂಡಿತು. ವಿವಿಧ ಮಠದ ಪೀಠಾಧಿಕಪತಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ನೂರಾರು ಯುವತಿಯರು, ಮಹಿಳೆಯರು ಕುಂಭ ಕಳಸದೊಂದಿಗೆ ಪೂರ್ಣಕುಂಭ, ಸಕಲವಾದ್ಯ, ನಂದಿಕೋಲು, ಡೊಳ್ಳು, ಝಾಂಜ್ ಮೇಳ, ಪುರವಂತರ ಒಡುಪಿನೊಂದಿಗೆ ಪ್ರಾರಂಭವಾಯಿತು. ಆರ್.ಜಿ. ರಸ್ತೆಯಲ್ಲಿ ಸಾಗಿದ ಉತ್ಸವ ನಿರಂತರ 6 ಗಂಟೆಗಳ ತನಕ ಸಾಗಿತು.

ಸಾಗರದ ಶಿವಪ್ಪ ನಾಯಕ ಮಹಿಳಾ ಡೊಳ್ಳಿನ ಕಲಾ ತಂಡ, ಚಿತ್ರದುರ್ಗದ ನಗಾರಿ ವಾದ್ಯ, ಕೀಲುಕುದುರೆ, ಗಾರುಡಿ ಗೊಂಬೆಗಳು ಈ ಬಾರಿಯ ಮೆರವಣಿಗೆಯ ಆಕರ್ಷಣೆಯಾಗಿದ್ದವು. ಮಹಿಳೆಯರು ಬಾರಿಸಿದ ಡೊಳ್ಳು ಎಲ್ಲರನ್ನೂ ಗಮನ ಸೆಳೆಯಿತು. ಡೊಳ್ಳು ಕುಣಿತದ ಜೊತೆಗೆ ಡಿಜೆ ಸೌಂಡ್ ಆರ್ಭಟ ಮುಗಿಲು ಮುಟ್ಟಿತ್ತು. ಸಾವಿರಾರು ಯುವಕರು ಕುಣಿದು ಕುಪ್ಪಳಿಸಿದರು.

ಈ ಪುರಾಣ ಮಹಾಮಂಗಲೋತ್ಸವಕ್ಕೆ ಪಟ್ಟಣ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ್ದ ಸುಮಾರು ೧೦ ಸಾವಿರಕ್ಕೂ ಹೆಚ್ಚು ಜನ ಸಾಕ್ಷಿಯಾದರು. ಪಟ್ಟಣದ ವರ್ತಕರು ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡ ಹಿನ್ನೆಲೆ ಇಡೀ ಹುಬ್ಬಳ್ಳಿ-ಹೈದ್ರಾಬಾದ್ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಯಿತು. ಇಲ್ಲಿನ ಪಿಐ ಸುಧೀರ್ ಬೆಂಕಿ ನೇತೃತ್ವದ ಪೊಲೀಸರ ತಂಡ ಪರ್ಯಾಯ ಮಾರ್ಗ ಕಲ್ಪಿಸಲು ಹರಸಾಹಸಪಟ್ಟಿತು. ಉತ್ಸವ ಸಾಗುವ ಮಾರ್ಗದಲ್ಲಿ ಸೂರ್ಯವಂಶಿ ಕ್ಷತ್ರೀಯ ಸಮಾಜ ಮತ್ತು ಆರ್ಯವೈಶ್ಯ ಸಮಾಜದ ಕೆಲ ವರ್ತಕರು ನೆರೆದ ಭಕ್ತರಿಗೆ ತಂಪುಪಾನೀಯ, ಮಜ್ಜಿಗೆ ಶುದ್ಧ ಕುಡಿಯುವ ನೀರು ವಿತರಿಸಿದರು.ಸಂಜೆಯವರೆಗೂ ಅನ್ನದಾಸೋಹ:ಅಲಬನೂರಿನ ಅಮರೇಶಪ್ಪ ನೇತೃತ್ವದ ೧೦ ಬಾಣಸಿಗರು ಸತತ ೨೪ ಗಂಟೆಗಳ ಕಾಲ ಸಾವಿರಾರೂ ಜನ ಭಕ್ತರಿಗೆ ಅನ್ನಪ್ರಸಾದ ಸೇವೆ ಮಾಡಿದ್ದರು. ಪುರಾಣ ಸಮಿತಿಯ ಪ್ರಕಾರ ಗುರುವಾರದ ಅನ್ನದಾಸೋಹಕ್ಕೆ ೧೬ ಕ್ವಿಂಟಲ್ ಅಕ್ಕಿ, ೯ ಕ್ವಿಂಟಲ್ ಸಕ್ಕರೆ, ಐದುವರೆ ಕ್ವಿಂಟಲ್ ಕಡ್ಲೆಹಿಟ್ಟು, ೨ ಕ್ವಿಂಟಲ್ ೧೦ ಕೆಜಿ ತೊಗರೆಬೇಳೆ ಸೇರಿ ೬ ಕ್ವಿಂಟಲ್ ತರಕಾರಿ ಬಳಕೆಯಾಗಿದ್ದು, ಅನ್ನದಾಸೋಹ ಕಾರ್ಯಕ್ರಮ ಸಂಜೆಯವರೆಗೂ ನಡೆಯಿತು. ಶುಕ್ರವಾರ ಸಂಜೆ ಜೋಡು ರಥೋತ್ಸವ ನಡೆಯಲಿದೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ