ಒತ್ತಡದ ಬದುಕಿನಲ್ಲಿ ಶರಣರ ವೈಚಾರಿಕ ವಚನಗಳು ಪ್ರಸ್ತುತ: ಸೋನಾರ

KannadaprabhaNewsNetwork | Published : Oct 9, 2024 1:33 AM

ಸಾರಾಂಶ

ವಚನಗಳ ಆಲಿಸುವಿಕೆ ಮತ್ತು ವಚನ ಪಠಣದಿಂದ ಮಾನವನ ಮನೋವಿಕಾಸ ಹೊಂದಿ ಸೃಜನಶೀಲತೆ ಮತ್ತು ವೈಚಾರಿಕತೆಗೆ ಹಾದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಶರಣರ ವಚನದಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ನಟರಾಜ ಸೋನಾರ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇಂದಿನ ಒತ್ತಡದ ಬದುಕಿನಲ್ಲಿ ಶರಣರ ವೈಚಾರಿಕ ವಚನಗಳು ಅವಶ್ಯವಾಗಿವೆ ಎಂದು ಶರಣ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ನಟರಾಜ ಸೋನಾರ ಹೇಳಿದರು.

ಪಟ್ಟಣದ ಬಸವ ಭವನದಲ್ಲಿ ನಡೆದ 149ನೇ ವಚನ ಚಿಂತನ ಕಾರ್ಯಕ್ರಮದಲ್ಲಿ ಶರಣರ ವಚನದಲ್ಲಿ ಸಾಮರಸ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ವಚನಗಳ ಆಲಿಸುವಿಕೆ ಮತ್ತು ವಚನ ಪಠಣದಿಂದ ಮಾನವನ ಮನೋವಿಕಾಸ ಹೊಂದಿ ಸೃಜನಶೀಲತೆ ಮತ್ತು ವೈಚಾರಿಕತೆಗೆ ಹಾದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಶರಣರು ನುಡಿದಂತೆ ನಡೆದು ಬಾಳಿ ತೋರಿದವರು. ಹಲವಾರು ಶರಣರು ತಮ್ಮ ವಚನಗಳನ್ನು ಮಹಾಮನೆಯಲ್ಲಿ ಚಿಂತನಮಂಥನ ಗೈದು ಸಮಾಜದ ಓರೆ ಕೋರೆಗಳನ್ನು ಬಲು ನಿಷ್ಠುರವಾಗಿ ಖಂಡಿಸಿದರು. ವಚನಗಳನ್ನು ವಾಚಿಸಲೂಬಹುದು, ಹಾಡಲೂಬಹುದು ಇವು ಜನಸಾಮಾನ್ಯರ ತಿಳಿವಿಗೆ ಸಹಕಾರಿಯಾಗಿವೆ ಎಂದರು.

ವಚನಸಾಹಿತ್ಯ ಎನ್ನುವುದು ನಮ್ಮ ಬದುಕಿನ ಸಾಹಿತ್ಯವಾಗಿದೆ. ಅಲಕ್ಷಿತ ಸಮುದಾಯದವರು ಬರೆದ ಈ ವಚನಗಳು ಮೌಢ್ಯ ಆಚರಣೆ, ಕಂದಾಚಾರಗಳನ್ನು ಬದಿಗಿರಿಸಿ ವೈಚಾರಿಕ ವಿಚಾರಗಳನ್ನು ಪ್ರಸ್ತುತ ಪಡಿಸಿವೆ. ಜನರ ಸಾಹಿತ್ಯವಾಗಿ ಮನಮನೆ ಬೆಳಗಿದವು. ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ. ಅದರಲ್ಲಿ ಮಾನವನ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ ಎಂದು ಹೇಳಿದರು.

ಈ ಸಂದರ್ಭ ಹಿರಿಯರಾದ ಎಸ್.ಬಿ. ಸುಂಕದ, ಶಿವಸಂಗಪ್ಪ ಬಿಜಕಲ್, ಮಹಾದೇವಪ್ಪ ಮಹಾಲಿಂಗಪುರ, ಎಸ್.ಕೆ. ಪಾಟೀಲ್, ರಾಮನಗೌಡ ಪಾಟೀಲ್, ಸಿದ್ದರಾಮಪ್ಪ ವಂದಾಲಿ, ಎಂ.ಎಂ. ಗೊಣ್ಣಾಗರ, ಸಂಗಪ್ಪ ಎಲಿಗಾರ, ಚಂದ್ರಶೇಖರ, ಮಲ್ಲನಗೌಡ ಅಗಸಿಮುಂದಿನ, ಶಿವಮ್ಮ ನಿಡಶೇಸಿ, ನೀಲಮ್ಮ ಮಹಾಲಿಂಗಪುರ ಉಪಸ್ಥಿತರಿದ್ದರು. ಬಸವ ಸಮಿತಿಯ ಕಾರ್ಯದರ್ಶಿ ಮಹೇಶ ಹಡಪದ ನಿರೂಪಿಸಿದರು.

Share this article