ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆ ವಿರುದ್ಧ ಈಗಾಗಲೇ ಹಲವು ಮಜಲುಗಳಲ್ಲಿ ಹೋರಾಟಗಳನ್ನು ನಡೆಸಿದ್ದು, ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ. ಮುಖ್ಯವಾಗಿ ಸಾರ್ವಜನಿಕರಲ್ಲಿ ಈ ಕುರಿತು ಹೆಚ್ಚು ಅರಿವು ಮೂಡಿ ಅವರು ಹೋರಾಟದಲ್ಲಿ ನೇರವಾಗಿ ಭಾಗಿಯಾಗಬೇಕು. ಈ ದೃಷ್ಟಿಯಿಂದ ಹೋರಾಟದ ಕುರಿತಾದ ಕಾರ್ಯಕ್ರಮಗಳು ಮುಂದುವರೆಯಲಿದೆ ಎಂದು ಹೇಳಿದರು.
ಈ ಹೋರಾಟದಲ್ಲಿ ಹಲವಾರು ಸಂಘಟನೆಗಳು ಜೊತೆಯಾಗಲಿದೆ. ಮುಖ್ಯವಾಗಿ ಶಿವಮೊಗ್ಗ ನಗರದ ಅಣ್ಣಾ ಹಜಾರೆ ಹೋರಾಟ ಸಮಿತಿ, ಸೈಕಲ್ ಕ್ಲಬ್, ಸಾಹಸ ಮತ್ತು ಸಾಂಸ್ಕೃತಿಕ ಅಕಾಡೆಮಿ, ತರುಣೋದಯ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.ಹೋರಾಟದ ಭಾಗವಾಗಿ ಏ.16 ರಂದು ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಖ್ಯಾತ ವೈದ್ಯ ಡಾ.ಶಿವರಾಮಕೃಷ್ಣ, ಡಾ.ಪಿ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ನಗರದ ಎರಡು ಮಾರ್ಗದಲ್ಲಿ ಸಂಚರಿಸುವ ಜಾಥಾವು ಮಹಾವೀರ ವೃತ್ತದಲ್ಲಿ ಸಂಪನ್ನಗೊಳ್ಳಲಿದ್ದು, ನಂತರ ಸಮಾರೋಪ ಹಾಗೂ ಬಹಿರಂಗ ಸಭೆ ನಡೆಯಲಿದೆ ಎಂದರು.
ಈ ಯೋಜನೆ ವಿರುದ್ಧ ಸಾಕಷ್ಟು ವಿರೋಧ ಮತ್ತು ಪ್ರತಿಭಟನೆಗಳು ನಡೆದಿದ್ದು, ಹಲವಾರು ಸಂಘ ಸಂಸ್ಥೆಗಳು, ಮಠಾಧೀಶರು, ಪರಿಸರ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ವಿಷಯ ತಜ್ಞರು ಯೋಜನೆಯಲ್ಲಿನ ಲೋಪದೋಷಗಳನ್ನು ಕೆಪಿಸಿಎಲ್ಗೆ ಮನವರಿಕೆ ಮಾಡಿಕೊಟ್ಟರೂ ಸಹ ಕೆಪಿಸಿಎಲ್ ಪರಿಸರಕ್ಕೆ ಮತ್ತು ಪಶ್ಚಿಮಘಟ್ಟಗಳಿಗೆ ಮಾರಕವಾಗಿರುವ ಹಾಗೂ ಯಾವುದೇ ಆರ್ಥಿಕ ಲಾಭವನ್ನು ತರದ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಪ್ರಶ್ನಾರ್ಥಕವಾಗಿದೆ ಎಂದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆ ಕೈ ಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.