ಮಲೆನಾಡಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಜಾರಿಗೆ ಬಿಡಲ್ಲ: ಮಾಜಿ ಸಚಿವ ಈಶ್ವರಪ್ಪ

KannadaprabhaNewsNetwork |  
Published : Jul 16, 2026, 01:45 AM IST
ಪೊಟೋ: 15ಎಸ್‌ಎಂಜಿಕೆಪಿ03ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಹಾಗೂ ಕೆಪಿಸಿಎಲ್ ಸಂಸ್ಥೆಗಳು ಕೈಜೋಡಿಸಿ ನಿಯಾಸ್ (ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು) ಸಂಸ್ಥೆಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪೂರಕವಾದ ಸುಳ್ಳು ವರದಿ ಕೊಡಿಸಿವೆ. ಅವರು ಏನೇ ಮಾಡಿದರೂ ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಮಲೆನಾಡಿನಲ್ಲಿ ಜಾರಿಗೆ ತರಲು ಬಿಡುವುದಿಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಹಾಗೂ ಕೆಪಿಸಿಎಲ್ ಸಂಸ್ಥೆಗಳು ಕೈಜೋಡಿಸಿ ನಿಯಾಸ್ (ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು) ಸಂಸ್ಥೆಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಪೂರಕವಾದ ಸುಳ್ಳು ವರದಿ ಕೊಡಿಸಿವೆ. ಅವರು ಏನೇ ಮಾಡಿದರೂ ಯಾವುದೇ ಕಾರಣಕ್ಕೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಮಲೆನಾಡಿನಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂಧನ ಸಚಿವ ಜಾರ್ಜ್ ಅವರ ಪ್ರೇರಣೆಯಿಂದಲೇ ನಿಯಾಸ್ ಸಂಸ್ಥೆ ಈ ರೀತಿಯ ಸುಳ್ಳು ವರದಿಯನ್ನು ನೀಡಿದೆ. ಇದೊಂದು ವ್ಯವಸ್ಥಿತ ಕುತಂತ್ರವಾಗಿದ್ದು, ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಜಾರಿಗೆ ಬರಲು ಬಿಡುವುದಿಲ್ಲ. ಈ ಜನಾಂದೋಲನಕ್ಕೆ ಈಗಾಗಲೇ ಮಲೆನಾಡಿನ ಸ್ವಾಮೀಜಿಗಳು, ನಾಗರಿಕರು ಹಾಗೂ ಪರಿಸರಾಸಕ್ತರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

ರಾಜ್ಯ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವು ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಒಪ್ಪಿಗೆ ನೀಡಿಲ್ಲ ಎಂದು ಹೇಳಿದೆ. ಆದರೆ ರಾಜ್ಯ ಸರ್ಕಾರ ನಿಯಾಸ್ ಸಂಸ್ಥೆಯಿಂದ ಯೋಜನೆಗೆ ಪೂರಕವಾದ ವರದಿ ಪಡೆದುಕೊಂಡು ಆ ವರದಿಯನ್ನು ಬಿಡುಗಡೆಗೊಳಿಸುವ ಮೂಲಕ ನ್ಯಾಯಾಲಯ ಹಾಗೂ ಸಾರ್ವಜನಿಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಅಧಿಕೃತ ಸಂಸ್ಥೆಯಲ್ಲ: ಪ್ರಮುಖರಾದ ಶ್ರೀಕಾಂತ್ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹರಡುತ್ತಿರುವುದು ಸುಳ್ಳು ಸುದ್ದಿ. ಇದಕ್ಕಾಗಿ ಬಳಸಿಕೊಂಡಿರುವ ನಿಯಾಸ್ ಸಂಸ್ಥೆಯು ಸರ್ಕಾರದಿಂದ ಯಾವುದೇ ಅಧಿಕೃತ ಮಾನ್ಯತೆ ಪಡೆದ ಸಂಸ್ಥೆಯಲ್ಲ ಎಂದರು.

ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಡಾ.ಎಚ್.ಎಸ್. ಸಿಂಗ್ ಮತ್ತು ಪ್ರೊ. ಸುಕುಮಾರನ್ ನೀಡಿರುವ ವರದಿಯಲ್ಲಿ ಈ ಯೋಜನೆಯ ಬಗ್ಗೆ ಸ್ಪಷ್ಟವಾದ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಹಿರಿಯ ಅಧಿಕಾರಿ ಪ್ರಣೀತಾ ಕೌಲ್ ಅವರೂ ಈ ಯೋಜನೆ ಪರಿಸರಕ್ಕೆ ಮಾರಕ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಿದ್ದಾಗ ಪರಿಸರದ ಬಗ್ಗೆ ವರದಿ ನೀಡಲು ಯಾವುದೇ ಕಾನೂನು ಮಾನ್ಯತೆ ಇಲ್ಲದ ನಿಯಸ್‌ನಿಂದ ಕೆಪಿಸಿಎಲ್ ವರದಿ ತರಿಸಿಕೊಂಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.

ಸುಪ್ರೀಂಕೋರ್ಟ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಇಸಿ ಸದಸ್ಯರು ಸುಮೋಟೋ ಸ್ಥಳ ಪರಿಶೀಲನೆ ನಡೆಸಿದ್ದರೂ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೆ ಕೇಂದ್ರ ಸರ್ಕಾರವೂ ಈ ಯೋಜನೆಗೆ ಕೇಂದ್ರ ತಜ್ಞರ ತಂಡ ಒಪ್ಪಿಗೆ ಸೂಚಿಸಿಲ್ಲ ಎಂದು ಇತ್ತೀಚೆಗೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಈ ಮಧ್ಯೆ ಜೂ. 23 ರಂದು ನಿಯಾಸ್ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ಕೆಪಿಸಿಎಲ್ ಈ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಿಲ್ಲ. ತರಾತುರಿಯಲ್ಲಿ ರಾಜ್ಯ ಸರ್ಕಾರ ನಿಯಾಸ್‌ನಿಂದ ವರದಿ ತರಿಸಿಕೊಂಡು ತಮಗೆ ಪೂರಕವಾಗುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆಗಳನ್ನು ಬಿಡುಗಡೆಗೊಳಿಸಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಕೆ.ಈ. ಕಾಂತೇಶ್, ಎಸ್.ಬಿ. ಅಶೋಕ್‌ಕುಮಾರ್, ಎಂ.ಜಿ.ಬಾಲು, ಶಿವಾಜಿ, ಜನಾರ್ಧನ್ ಪೈ, ಪರಿಸರ ರಮೇಶ್, ಶ್ರೀಕಾಂತ್, ಮೋಹನ್ ಜಾದವ್, ಕಾರ್ಣಿಕ್, ಪ್ರಕಾಶ್ ಮೊದಲಾದವರಿದ್ದರು.

--------------------ಬಾಕ್ಸ್‌..

ಕೆಪಿಸಿಎಲ್ ಗಿಣಿಪಾಠ..

ಕೆಪಿಸಿಎಲ್ ಅವರು ಹೇಳಿಕೊಟ್ಟ ಗಿಣಿಪಾಠವನ್ನು ನಿಯಾಸ್ ಮಾಡಿದೆ. ಅದರಂತೆ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳಲಾಗಿದೆ. ವನ್ಯಜೀವಿ, ಪರಿಸರ ನಾಶ, ಮೊದಲಾದವುಗಳ ಬಗ್ಗೆ ನಿಯಾಸ್ ಯಾವುದೇ ಅಧ್ಯಯನವನ್ನೂ ಮಾಡಿಲ್ಲ. ಕೆಪಿಸಿಎಲ್ ನಿಯಾಸ್ ಮೂಲಕ ಸಾರ್ವಜನಿಕರಿಗೆ ಹಸಿ ಸುಳ್ಳು ಹೇಳಿಸುತ್ತಿದೆ. ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿಯೇ ಪರಿಸರ ಮಾರಕ ಯೋಜನೆ ಜಾರಿಗೊಳಿಸುತ್ತೇವೆ ಎಂಬ ಹಠ ಕೆಪಿಸಿಎಲ್ ಮತ್ತು ರಾಜ್ಯ ಸರ್ಕಾರಕ್ಕೆ ಏಕೆ ಎಂದು ಹಿರಿಯ ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಕಡಿಯಲಾಗುವ ಲಕ್ಷಾಂತರ ಮರಗಳು ಹಾಗೂ ಜೀವವೈವಿಧ್ಯದ ನಾಶದ ಬಗ್ಗೆ ನಿಯಾಸ್ ಸಂಸ್ಥೆ ನೀಡಿರುವ ವರದಿಯಲ್ಲಿ ಉಲ್ಲೇಖವೇ ಇಲ್ಲ. ದಟ್ಟ ಶರಾವತಿ ವನ್ಯಜೀವಿಧಾಮದ ಒಳಗೆ ಸುರಂಗ ಮಾರ್ಗ ಕೊರೆದು, ಪರಿಸರ ಹಾಳುಮಾಡಿ ವಿದ್ಯುತ್ ಸಂಗ್ರಹಣೆ ಮಾಡುವ ಇಂತಹ ಬೇಜವಾಬ್ದಾರಿಯುತ ಯೋಜನೆ ಬೇಡ. ಕೆಪಿಸಿ ಧೈರ್ಯವಿದ್ದರೆ ಈ ವರದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ತಕ್ಷಣ ಪ್ರಕಟಿಸಲಿ ಎಂದು ಒತ್ತಾಯಿಸಿದರು.

---------------

ಪೊಟೋ: 15ಎಸ್‌ಎಂಜಿಕೆಪಿ03

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಪತ್ರಿಕೆ ಓದುವ ಹವ್ಯಾಸದಿಂದ ಜ್ಞಾನದ ವೃದ್ಧಿ: ಅಷ್ಟೂರೆ
ರೈತ ಸಂಘದ ಹನೂರು ತಾಲೂಕು ಅಧ್ಯಕ್ಷರಾಗಿ ಅಜ್ಜಿಪುರ ರಾಜಣ್ಣ ಆಯ್ಕೆ