ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬೆಂಗ್ಳೂರಿಗೆ, ಅವೈಜ್ಞಾನಿಕ ಯೋಜನೆ: ಮಾಜಿ ಸಚಿವ ಎಚ್.ಹಾಲಪ್ಪ

KannadaprabhaNewsNetwork |  
Published : Aug 23, 2024, 01:13 AM ISTUpdated : Aug 23, 2024, 01:01 PM IST
ಹೆಚ್.ಹಾಲಪ್ಪ ಮಾತನಾಡಿದರು | Kannada Prabha

ಸಾರಾಂಶ

ಲಿಂಗನಮಕ್ಕಿ ಅಣೆಕಟ್ಟಿನಿಂದ 40 ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ಒಯ್ಯಲು ಈಗಾಗಲೆ ಸರ್ವೇಗೆ ₹73 ಲಕ್ಷ ಮೀಸಲಿಡಲಾಗಿದೆ. ತಕ್ಷಣ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು

 ಸಾಗರ :  ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದದ್ದು. ಈ ಸಂಬಂಧ ನಡೆಸುವ ಪರಿಸರ ಪರವಾದ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗಕ್ಕೆ ನೀರಿಲ್ಲ. ಇರುವ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರಕ್ಕೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ. ಲಿಂಗನಮಕ್ಕಿ ಅಣೆಕಟ್ಟಿನಿಂದ 40 ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ಒಯ್ಯಲು ಈಗಾಗಲೆ ಸರ್ವೇಗೆ ₹೭೩ ಲಕ್ಷ ಮೀಸಲಿಡಲಾಗಿದೆ. ತಕ್ಷಣ ಸರ್ಕಾರ ತನ್ನ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಹಿಂದೆ 2019 ರಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಮಾಡಲಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಯೋಜನೆ ಕುರಿತು ಆಸಕ್ತಿ ವಹಿಸಿದ್ದರು. ಈ ಸಂದರ್ಭದಲ್ಲಿ ನಾನು ಶಾಸಕನಾಗಿದ್ದೆ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ, ಸಾಗರ ಬಂದ್ ಸಹ ನಡೆಸಲಾಗಿತ್ತು. ವಿವಿಧ ಮಠಾಧೀಶರು, ಪರಿಸರವಾದಿಗಳು, ಸಂಘಟನೆಗಳು ಬೆಂಬಲ ನೀಡಿದ್ದರಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಾಗಿತ್ತು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಯೋಜನೆ ಕೈಬಿಡುವಂತೆ ಮಾಡಿಕೊಂಡ ಮನವಿಗೆ ಅವರು ಸ್ಪಂದಿಸಿದ್ದರು. ಇದೀಗ ಮತ್ತೊಮ್ಮೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಆಸ್ಪದ ನೀಡುವುದಿಲ್ಲ. ಈ ಸಂಬಂಧ ಯಾವುದೇ ಸಂಘಟನೆ ಹೋರಾಟ ಕೈಗೆತ್ತಿಕೊಂಡರು ಅದಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡಲಾಗುತ್ತದೆ. ಜೊತೆಗೆ ನಮ್ಮ ಹಂತದಲ್ಲಿ ಸಹ ಹೋರಾಟ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದರು.

ಈಗಾಗಲೆ ಎತ್ತಿನಹೊಳೆ ಯೋಜನೆ ವಿಫಲವಾಗಿದೆ. ಸುಮಾರು ₹22 ಸಾವಿರ ಕೋಟಿ ಖರ್ಚು ಮಾಡಿ ಒಂದು ಹನಿ ನೀರನ್ನು ಹರಿಸಲು ಆಗಲಿಲ್ಲ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಸಹ ಇಂತಹದ್ದೆ ಆಗಿದೆ. ಸುಮಾರು ₹35  ಸಾವಿರ ಕೋಟಿ ಯೋಜನೆಗೆ ತಗಲುತ್ತದೆ. ಸಮುದ್ರಮಟ್ಟದಿಂದ ೨೮೦೦ ಅಡಿ ಎತ್ತರಕ್ಕೆ ನೀರು ಹರಿಸಲು ತಗಲುವ ವಿದ್ಯುತ್, ಶ್ರಮದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಜೊತೆಗೆ ಅಪಾರ ಪ್ರಮಾಣದ ಪರಿಸರ, ಅರಣ್ಯನಾಶವಾಗುತ್ತದೆ. ಪಶ್ಚಿಮಾಭಿಮುಖವಾಗಿ ನದಿಯನ್ನು ತಿರುಗಿಸುವುದೇ ಕಾನೂನಿಗೆ ವಿರುದ್ಧವಾದದ್ದು. ಐಎಎಸ್ ಅಧಿಕಾರಿ ಕೆಲವರ ಲಾಬಿಯಿಂದ ಯೋಜನೆ ಮುನ್ನೆಲೆಗೆ ಬಂದಿದೆ. ತುಷಾರ್ ಗಿರಿನಾಥ್ ಶಿವಮೊಗ್ಗ ಜಿಲ್ಲೆಯಲ್ಲಿದ್ದು ಇಲ್ಲಿನ ನೀರನ್ನು ಕುಡಿದವರು. ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಶರಾವತಿ ನದಿ ನೀರು ಒಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಸಬಾರದು ಎಂದು ಹೇಳಿದರು.

ಕಾರ್ಯಸಾಧುವಲ್ಲದ ಯೋಜನೆ ಅನುಷ್ಠಾನದ ಹಿಂದೆ ಕಮಿಷನ್ ಲಾಬಿ ಇದೆ ಎನ್ನುವ ಚರ್ಚೆ ಸಹ ನಡೆಯುತ್ತಿದೆ. ಬೆಂಗಳೂರಿಗೆ ಶರಾವತಿ ನದಿ ನೀರು ಹರಿಸುವುದು ಮತ್ತು ಮತ್ತೊಂದು ಪರಿಸರ ವಿರೋಧಿ ಯೋಜನೆಯಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿದರು.

ಡಾ.ರಾಜನಂದಿನಿ ಕಾಗೋಡು, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶಪ್ರಸಾದ್, ಸತೀಶ್ ಕೆ., ಹರೀಶ್ ಮೂಡಳ್ಳಿ, ಸಂತೋಷ್ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆನ್‌ಝೀಗಳೇ ಎಲ್ಲಿದ್ದೀರಿ? ಕೆಪಿಎಸ್ಸಿ ಬಗ್ಗೆ ಮೌನವಾಗಿ ಯಾಕೆ ಇದ್ದೀರಿ?: ಎಚ್‌ಡಿಕೆ
ಗವಿಮಠದ ಶ್ರೀಗಳಿಂದಲೇ ದಸರಾ ಹಬ್ಬ ಉದ್ಘಾಟನೆ