ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ - ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಳುಮೆಣಸಿನ ಕ್ರಾಂತಿ: ಅಡಿಕೆಯೊಂದಿಗೆ ಕಾಳುಮೆಣಸು ಬೆಳೆದರೆ ರೈತನ ಆದಾಯ ದ್ವಿಗುಣವಾಗುತ್ತದೆ ಎಂಬ ಸತ್ಯವನ್ನು ಮನಗಂಡು, ಅದನ್ನು ಕೇವಲ ತಮ್ಮ ತೋಟಕ್ಕೆ ಸೀಮಿತಗೊಳಿಸದೆ ಸಾವಿರಾರು ರೈತರಿಗೆ ಮನದಟ್ಟು ಮಾಡಿದವರು. ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸಾಪ್ ತಂಡಗಳನ್ನು ರಚಿಸಿ, ಸಾವಿರಾರು ಮಂದಿಯನ್ನು ಒಗ್ಗೂಡಿಸಿ, ಪ್ರತಿನಿತ್ಯ ತಳಿ ಆಯ್ಕೆ, ನಾಟಿ ವಿಧಾನ, ರೋಗ ನಿರ್ವಹಣೆ, ಇಳುವರಿ ಹೆಚ್ಚಳದ ಬಗ್ಗೆ ಚರ್ಚಿಸಿ, ಅವರಲ್ಲಿ ಕಾಳುಮೆಣಸಿನ ಬಗೆಗೆ ಹುಚ್ಚು ಹಚ್ಚಿಸಿದ ಅಪರೂಪದ ಸಂಘಟಕರು. ಇಂದು ಕರಾವಳಿಯ ಸಾವಿರಾರು ಯುವ ರೈತರು ಅವರ ವಾಟ್ಸಾಪ್ ತಂಡಗಳಿಂದಲೇ ಕೃಷಿಗೆ ಮರಳಿದ್ದಾರೆ.
ಸಮಗ್ರ ತೋಟಗಾರಿಕಾ ಸೇವೆ: ಸಾಧನೆಯ ಹಾದಿ: ಕರಾವಳಿಯ ಜೀವನಾಡಿಯಾದ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ, ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಕೂಲಿ ಸಮಸ್ಯೆ ಮೊದಲಾದ ನಾನಾ ಸಂಕಷ್ಟಗಳಿಂದ ನಲುಗಿ ಹೋಗುತ್ತಿರುವ ಈ ಆಧುನಿಕ ದಿನಮಾನಗಳಲ್ಲಿ, ಕೃಷಿಕರಿಗೆ ಹೊಸ ದಾರಿ, ಹೊಸ ಸಾಧ್ಯತೆ ತೋರಿದ್ದಾರೆ.