ಸವಾಲು ಎದುರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಶಶಿ ಸಾಲಿ: ಬಸವರಾಜ ಹೊರಟ್ಟಿ

KannadaprabhaNewsNetwork | Published : May 20, 2024 1:41 AM

ಸಾರಾಂಶ

ಹಿಂದಿನ ದಿನಗಳಲ್ಲಿ ಬಡವ, ಶ್ರೀಮಂತ ಯಾರೇ ಇರಲಿ, ಸ್ನೇಹಿತರು ಜೀವಕ್ಕೆ ಜೀವ ಕೊಡುತ್ತಿದ್ದರು. ಆದರೆ, ಇಂದು ಬದಲಾದ ಕಾಲಘಟದಲ್ಲಿ ಲಾಭ ಮಾತ್ರ ನೋಡುವ ಸ್ನೇಹವಿದೆ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಬದುಕಿನಲ್ಲಿ ಬಂದ ಕಷ್ಟ, ಸವಾಲು ಹಾಗೂ ಸಮಸ್ಯೆಗಳಿಗೆ ಎದೆಗುಂದದೆ ತಾಳ್ಮೆಯಿಂದ ಎಲ್ಲವನ್ನೂ ಎದುರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಶಶಿ ಸಾಲಿ ಅವರ ಬದುಕು ಮಾದರಿ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಶಶಿ ಸಾಲಿ ಅಭಿನಂದಾ ಸಮಿತಿ, ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಗದಗ ತೋಂದಾರ್ಯ ಮಠದ ಸಹಯೋಗದಲ್ಲಿ ಭಾನುವಾರ ನಗರದ ಸೃಜನಾ ರಂಗಮಂದಿರದಲ್ಲಿ ನಡೆದ ಶಶಿ ಸಾಲಿ ಅಭಿನಂದನೆ ಹಾಗೂ ''''ನೆನಪು ಹರಿಗೋಲು'''' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ಬಡವ, ಶ್ರೀಮಂತ ಯಾರೇ ಇರಲಿ, ಸ್ನೇಹಿತರು ಜೀವಕ್ಕೆ ಜೀವ ಕೊಡುತ್ತಿದ್ದರು. ಆದರೆ, ಇಂದು ಬದಲಾದ ಕಾಲಘಟದಲ್ಲಿ ಲಾಭ ಮಾತ್ರ ನೋಡುವ ಸ್ನೇಹವಿದೆ. ಹೀಗಾಗಿ ಮಕ್ಕಳಿಗೆ ಸಂಸ್ಕಾರ ಕಲಿಸಲು ಪಾಲಕರಿಗೆ ಹೇಳಿದರು.

ನಾನು, ಶಶಿ ಸಾಲಿ 1974ರಿಂದ ಬಾಲ್ಯದ ಸ್ನೇಹಿತರು. ನಂಬಿಕೆ, ವಿಶ್ವಾಸ, ಪ್ರೀತಿಗೆ ಮತ್ತೊಂದು ಹೆಸರೇ ಶಶಿ ಸಾಲಿ. ಸ್ನೇಹದಲ್ಲಿ ಭಿನ್ನಾಭಿಪ್ರಾಯ, ವೈಮನಸ್ಸು ಸಹಜ. ಆದರೆ, ಅವುಗಳು ಕ್ಷಣಿಕವಾಗಿರಬೇಕು. ಅಂದಾಗ ಮಾತ್ರ ಸ್ನೇಹ ಜೀವನ ಬಹಳ ಸಂದರ ಇರಲು ಸಾಧ್ಯ ಎಂದು ತಿಳಿಸಿದರು.

ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ದೇಶ-ವಿದೇಶಗಳಲ್ಲಿ ತರಬೇತಿ ಪಡೆದ ಶಶಿ ಸಾಲಿ ಓರ್ವ ಸೃಜನಶೀಲ ಛಾಯಾಗ್ರಾಹಕ. ನಮ್ಮ ರಂಗೋಲಿ ಕಲೆ ವಿದೇಶಿಗರಿಗೆ ಪರಿಚಯಿಸಿದ ಕೀರ್ತಿಯೂ ಅವರಿಗಿದೆ. ಸಾಲಿ ಅದೆಷ್ಟೋ ಜನರ ಬದುಕಿನ ಹೊಳೆ ದಾಟಿಸಿದ ಅಂಬಿಗ. ಅವರ ಹರಿಗೋಲು ಕೃತಿ ನಾಲ್ಕು ಭಾಗದಲ್ಲಿ ವಿಂಗಡಿಸಿದೆ ಎಂದರು.

ಅಭಿನಂದನಾ ಪರ ನುಡಿಗಳನ್ನಾಡಿದ ಡಾ. ಶಾಂತಿನಾಥ ದಿಬ್ಬದ, ತೋಂಟದ ಡಾ. ಸಿದ್ದಲಿಂಗ ಶ್ರೀಗಳಿಂದ 2018ರಲ್ಲಿ ಮೊಳಕೆ ಒಡೆದ ಶಶಿ ಸಾಲಿ ಅಭಿನಂದನೆ ನಾಲ್ಕು ವರ್ಷದ ಬಳಿಕ ಈಡೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪಲ್ಲಕ್ಕಿಯಲ್ಲಿ ಹೊತ್ತುತಂದ ''''ನೆನಪು ಹರಿಗೋಲು'''' ಕೃತಿ ಬಿಡುಗಡೆ ಬಳಿಕ ಶಶಿ ಸಾಲಿ ಹಾಗೂ ಆಶಾ ಸಾಲಿ ದಂಪತಿ ಸನ್ಮಾನಿಸುವ ಮೂಲಕ ಅಭಿನಂದಿಸಲಾಯಿತು.

ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಸಾನ್ನಿಧ್ಯ, ಮಾಜಿ ಸಂಸದ ಐ.ಜಿ. ಸನದಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅರವಿಂದ ಬೆಲ್ಲದ, ಪ್ರೊ. ಎಸ್.ವಿ. ಸಂಕನೂರ, ಸಂಗೀತಾ ಕಟ್ಟಿ, ಶಶಿಧರ ತೋಡ್ಕರ್, ಶಿವಾನಂದ ಪಟ್ಟಣಶಟ್ಟಿ ಇದ್ದರು.

Share this article