ಇಲ್ಲೆ ಹತ್ತಿರ ಇದ್ದಾಳೆ ಭದ್ರೆ, ಶೀಘ್ರ ಬಂದೇ ಬರ್ತಾಳೆ

KannadaprabhaNewsNetwork |  
Published : May 16, 2026, 12:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಶಾಸಕ ವೀರೇಂದ್ರ ಪಪ್ಪಿ ಶುಕ್ರವಾರ ಚಿತ್ರದುರ್ಗ ಹೊರವಲಯ ಕುಂಚಿಗನಹಾಳು ಬಳಿ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರೆ ಇಲ್ಲೆ ಸಮೀಪ ಇದ್ದಾಳೆ, ಶೀಘ್ರ ಹರಿದು ಬರ್ತಾಳೆ. ಬಹುದಿನದ ಕನಸು ನನಸು ಮಾಡ್ತಾಳೆ.

ಹೀಗೆಂದವರು ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ. ಶುಕ್ರವಾರ ಕುಂಚಿಗನಾಳ್ ಗ್ರಾಮದ ಬಳಿಯ ಹಳೆ ರಾಷ್ಟ್ರೀಯ ಹೆದ್ದಾರಿ-4ರ ಬಳಿ ಹಾದು ಹೋಗಿರುವ ಭದ್ರಾ ಮೇಲ್ದಂಡೆ ಕಾಲುವೆಯ ಕಾಮಗಾರಿಯ ಅಧಿಕಾರಿಗಳೊಂದಿಗೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಶೀಘ್ರ ಭದ್ರೆ ಹರಿದು ಬರಲಿದ್ದಾಳೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿರುವುದಾಗಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಯ ರೈತಾಪಿ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ 47 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲೂಕಿನ 19 ಕೆರೆಗಳಿಗೆ ಈಗಾಗಲೇ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇದರ ಜೊತೆಗೆ ಇನ್ನೂ 8 ಕೆರೆಗಳನ್ನು ಸೇರ್ಪಡೆ ಮಾಡಬೇಕೆಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರದ ಮುಖೇನ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ, ಕಾಟೀಹಳ್ಳಿ, ಸಿದ್ಧಾಪುರ, ಮಾನಂಗಿ, ಹುಲ್ಲೂರು, ತಿಮ್ಮಣ್ಣನಾಯಕನ ಕೆರೆ, ನಂದೀಪುರ ಹಾಗೂ ಅನ್ನೇಹಾಳ್ ಗ್ರಾಮಗಳ ಕೆರೆಗಳಿಗೆ ಭದ್ರಾ ನೀರು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಂದ ಅನುಮೋದನೆ ದೊರಕಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯ ದೊಡ್ಡಸಿದ್ದವ್ವನಹಳ್ಳಿ, ಮದಕರಿಪುರ, ಗೋನೂರು, ದಂಡಿನ ಕುರುಬರಹಟ್ಟಿ, ಬೊಮ್ಮನಹಳ್ಳಿ, ಸಾಸಲಹಟ್ಟಿ, ಮುತ್ತಯನಹಟ್ಟಿ, ಕಲ್ಲೇನಹಳ್ಳಿ, ಬಚ್ಚಬೋರನಹಟ್ಟಿ, ಹಂಪಯ್ಯನಮಾಳಿಗೆ, ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ ಗ್ರಾಮಗಳ ಬಳಿ ಹಾದು ಹೋಗಿರುವ ಕಾಲುವೆ ಕಾಮಗಾರಿಯ ಇದೇ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ವೀಕ್ಷಿಸಿದರು.

ಭದ್ರಾ ಮೇಲ್ದಂಡೆ ಅಧೀಕ್ಷಕ ಎಂಜಿನಿಯರ್ ಹರೀಶ್, ಸಹಾಯ ಕಾರ್ಯಪಾಲಕರಾದ ಎಂಜಿನಿಯರ್ ಕಿರಣ್ ಕುಮಾರ್, ಶ್ರೀಧರ್ ನಾಯಕ್, ಹರೀಶ್, ಸುನಿಲ್ ಕುಮಾರ್, ಜೀವಿತ, ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತ್ಯನಾರಾಯಣ್, ನಗರ ಅಭಿವೃದ್ಧಿ ಪ್ರಾಧಿಕಾರದಪ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಕಾಂಗ್ರೆಸ್ ಮುಖಂಡ ರಾಜೇಶ್ ಮಧುರೆ, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವಿ ಚಿನ್ನು ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

7 ವರ್ಷವಾದರೂ ಪೂರ್ಣಗೊಳ್ಳದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
ಬೇಲೂರು ಪುರಸಭೆ ನೂತನ ಅಧ್ಯಕ್ಷ ಅಕ್ರಂ ಶರೀಫ್ ರಿಗೆ ಗಾಣಿಗರ ಸಂಘದಿಂದ ಸನ್ಮಾನ