ರಾತ್ರೋರಾತ್ರಿ ಸರ್ಕಾರಿ ಗೋಮಾಳ ಜಾಗದಲ್ಲಿ ಶೆಡ್ ನಿರ್ಮಾಣ..!

KannadaprabhaNewsNetwork |  
Published : Mar 31, 2026, 02:00 AM IST
30ಕೆಎಂಎನ್ ಡಿ11  | Kannada Prabha

ಸಾರಾಂಶ

ಹರಿಹರಪುರ ಗ್ರಾಮಕ್ಕೆ ಸೇರಿಕೊಂಡಂತೆ ಸರ್ವೇ 24ರಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಗೋಮಾಳವಿದೆ. ಗ್ರಾಮದೊಳಗೆ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಕಿರಿದಾದ ಕಟ್ಟಡದಲ್ಲಿ ಗ್ರಾಪಂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ವಾರದ ಸಂತೆ ನಡೆಯುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹರಿಹರಪುರ ಗ್ರಾಮದ ಸರ್ವೇ 24 ರಲ್ಲಿನ ಸರ್ಕಾರಿ ಗೋಮಾಳದಲ್ಲಿ ಬಲ್ಯಾಢ್ಯರು ರಾತ್ರೋ ರಾತ್ರಿ ಅಕ್ರಮವಾಗಿ ಶೆಡ್‌ಗಳನ್ನು ಹಾಕಿ ಜಾಗ ವಶಪಡಿಸಿಕೊಂಡಿದ್ದು, ತಕ್ಷಣವೇ ಕಾನೂನು ಕ್ರಮ ವಹಿಸಿ ಸರ್ಕಾರಿ ಆಸ್ತಿ ಸಂರಕ್ಷಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮದ ಎಚ್.ಟಿ.ನಾರಾಯಣ, ನಿಂಗರಾಜು, ಮಂಜುನಾಥ್ ಸೇರಿದಂತೆ ಹಲವರು ಸರ್ಕಾರಿ ಜಾಗ ಅತಿಕ್ರಮವಾಗುತ್ತಿದ್ದರೂ ಅದರ ಸಂರಕ್ಷಣೆಗೆ ಮುಂದಾಗದ ಹರಿಹರಪುರ ಗ್ರಾಪಂನ ಕರ್ತವ್ಯ ಲೋಪವನ್ನು ಖಂಡಿಸಿದ್ದಾರೆ.

ಗ್ರಾಮಕ್ಕೆ ಸೇರಿಕೊಂಡಂತೆ ಸರ್ವೇ 24ರಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಗೋಮಾಳವಿದೆ. ಗ್ರಾಮದೊಳಗೆ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಕಿರಿದಾದ ಕಟ್ಟಡದಲ್ಲಿ ಗ್ರಾಪಂ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ವಾರದ ಸಂತೆ ನಡೆಯುತ್ತದೆ.

ಗ್ರಾಪಂ ಕಟ್ಟಡ ನಿರ್ಮಾಣಕ್ಕೆ, ಸಂತೆ ಮಾಳ ಮಾಡಲು ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಸದರಿ ಸರ್ಕಾರಿ ಗೋಮಾಳವನ್ನು ಕಾಯ್ದಿರಿಸಲಾಗಿದೆ. ಆದರೆ, ಕಳೆದ ಮೂರು ದಿನಗಳಿಂದ ಗ್ರಾಮದ ಬಲಾಢ್ಯರು ಸರ್ಕಾರಿ ಗೋಮಾಳಕ್ಕೆ ಲಗ್ಗೆ ಹಾಕಿ ತಮಗೆ ಬೇಕಾದಂತೆ ಮೂರು ನಾಲ್ಕು ಕಡೆ ಜಾಗ ಗುರುತಿಸಿಕೊಂಡು ಅಕ್ರಮ ಶೆಡ್ ಗಳನ್ನು ಹಾಕಿ ಜಾಗ ವಶಕ್ಕೆ ಪಡೆದಿದ್ದಾರೆ.

ಗ್ರಾಮದ ವಸತಿ ರಹಿತರಿಗೂ ಅವಕಾಶ ನೀಡದೆ ಸಂಪೂರ್ಣ ಎರಡು ಎಕರೆ ಸರ್ಕಾರಿ ಗೋಮಾಳವನ್ನು ವಶಪಡಿಸಿಕೊಂಡಿದ್ದು, ಅಕ್ರಮ ಶೆಡ್ ಹಾಕಲು ಸರ್ಕಾರಿ ಜಾಗದಲ್ಲಿದ್ದ ಬೇವು, ಹುಣಸೆ ಮುಂತಾದ ಹತ್ತಾರು ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದಾರೆ. ಸರ್ಕಾರಿ ಜಾಗ ಅತಿಕ್ರಮಣವಾಗುತ್ತಿದ್ದರೂ ಗ್ರಾಪಂಯಾವುದೇ ಕ್ರಮ ವಹಿಸದೆ ಅಕ್ರಮಕ್ಕೆ ಪರೋಕ್ಷ ಸಹಕಾರ ನೀಡುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ತಕ್ಷಣವೇ ಅಕ್ರಮ ಶೆಡ್ಡುಗಳನ್ನು ತೆರವುಗೊಳಿಸಿ ಸರ್ಕಾರಿ ಭೂಮಿ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಗ್ರಾಪಂ ಪಿಡಿಒ ನಾಹಿದಾ ಅಕ್ತರ್ ಮಾತನಾಡಿ, ಈ ಹಿಂದೆ ಕೆಲವರು ಸರ್ಕಾರಿ ಜಾಗದಲ್ಲಿ ಅಕ್ರಮ ಮನೆ ಕಟ್ಟಿಕೊಂಡಿದ್ದು ಇದರ ಬಗ್ಗೆ ಲೋಕಾಯುಕ್ತಕ್ಕೆ ಕೆಲವರು ದೂರು ನೀಡಿ ಈಗ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿದ್ದರೂ ಕೆಲವರು ಕಳೆದ ಒಂದು ವಾರದ ಹಿಂದೆ ಅಕ್ರಮ ಶೆಡ್ ಹಾಕಿದ್ದಾರೆ.

ಅಕ್ರಮ ಶೆಡ್ ಹಾಕಿರುವವರು ಯಾರು ಎನ್ನುವ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಅಕ್ರಮ ಶೆಡ್ಡುಗಳ ಮೇಲೆ ತೆರವಿಗೆ ಸೂಚಿಸಿ ನೋಟಿಸ್ ಅಂಟಿಸಲಾಗಿದೆ. ಈ ಬಗ್ಗೆ ತಾಪಂ ಇಒಗೂ ಲಿಖಿತ ಮಾಹಿತಿ ನೀಡಲಾಗಿದೆ. ಈಗಾಗಲೇ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಈ ನಡುವೆ ಸರ್ಕಾರಿ ರಜಾ ಅವಧಿಯನ್ನು ನೋಡಿಕೊಂಡು ಮತ್ತಷ್ಟು ಮಂದಿ ಕಲ್ಲು ಕಂಬಗಳನ್ನು ನೆಟ್ಟು ಅಕ್ರಮ ಶೆಡ್ ನಿರ್ಮಿಸುತ್ತಿರುವ ಮಾಹಿತಿಯಿದೆ. ಇದನ್ನು ಇಲಾಖೆ ಮೇಲಧಿಕಾರಿಗಳಿಗೆ ವರದಿ ಮಾಡುತ್ತೇನೆ. ಅವರ ಸೂಚನೆಗೆ ಅನುಗುಣವಾಗಿ ಅಕ್ರಮ ಶೆಡ್ಡುಗಳ ತೆರವಿಗೆ ಕ್ರಮ ವಹಿಸುತ್ತೇನೆ ಎಂದಿದ್ದಾರೆ.

ಗ್ರಾಪಂ ಆಡಳಿತಾಧಿಕಾರಿಗಳಾಗಿರುವ ತಾಲೂಕು ಪಶುವೈದ್ಯ ಇಲಾಖೆಯ ಅಧಿಕಾರಿ ಡಾ.ದೇವರಾಜು ಅಕ್ರಮ ಶೆಡ್ಡುಗಳ ನಿರ್ಮಾಣ ಇದೀಗ ನನ್ನ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆ ಬಗ್ಗೆ ಅಗತ್ಯ ಕ್ರಮ ವಹಿಸುತ್ತೇನೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜಕ್ಕೆ ತಿಗಳ ಸಮುದಾಯದ ಕೊಡುಗೆ ಅಪಾರ
ಸಮಾಜದಲ್ಲಿ ಮಹಿಳೆಯರ ಸಾಧನೆ ಗಮನಾರ್ಹ