ಬೀದಿಬದಿ ವ್ಯಾಪಾರಿಗಳಿಗೆ ಚೀಟಿ ಎತ್ತುವ ಮೂಲಕ ಸ್ಟಾಲ್‌ ನಿಗದಿ: ಮೇಯರ್‌ ಸುಧೀರ್‌ ಶೆಟ್ಟಿ

KannadaprabhaNewsNetwork |  
Published : Aug 31, 2024, 01:39 AM ISTUpdated : Aug 31, 2024, 01:40 AM IST
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮೇಯರ್‌ ಸುಧೀರ್ ಶೆಟ್ಟಿ  | Kannada Prabha

ಸಾರಾಂಶ

ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯ ಆ.31ರಂದು ನಡೆಯಲಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಹಾನಗರ ಪಾಲಿಕೆ ವ್ಯಾಪ್ತಿಯ 33 ಕಡೆಗಳಲ್ಲಿ ಬೀದಿ ಬದಿ ವ್ಯಾಪಾರ ವಲಯ ತೆರೆಯಲು ನಿರ್ಧರಿಸಲಾಗಿದೆ. 93 ಮಂದಿ ಬೀದಿ ವ್ಯಾಪಾರಿಗಳ ಪಟ್ಟಿ ತಯಾರಿದ್ದು, ಚೀಟಿ ಎತ್ತುವ ಮೂಲಕ ಸ್ಟಾಲ್‌ಗಳನ್ನು ವ್ಯಾಪಾರಿಗಳಿಗೆ ನಿಗದಿಪಡಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯ ಆ.31ರಂದು ನಡೆಯಲಿದೆ ಎಂದು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ಮಂಗಳೂರು ಪಾಲಿಕೆಯಲ್ಲಿ ಶುಕ್ರವಾರ ನಡೆದ ‘ಮೇಯರ್‌ ಫೋನ್‌ ಇನ್‌’ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲನೇ ಹಂತದಲ್ಲಿ ಸ್ಟೇಟ್‌ಬ್ಯಾಂಕ್‌ ಬಳಿಯ ಇಂದಿರಾ ಕ್ಯಾಂಟಿನ್‌ ಬಳಿ ಆರಂಭವಾಗಲಿದೆ. ಬೀದಿ ಬದಿ ವ್ಯಾಪಾರ ವಲಯಲ್ಲಿ ವಿದ್ಯುತ್‌, ನೀರಿನ ವ್ಯವಸ್ಥೆ ಸಹಿತ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗುವುದು.ಪಾಲಿಕೆ ವ್ಯಾಪ್ತಿಯ ಇತರೆ ಕಡೆಗಳಲ್ಲಿಯೂ ಹಂತ ಹಂತವಾಗಿ ವ್ಯಾಪಾರ ವಲಯ ತೆರೆಯಲಾಗುತ್ತದೆ. ಮಲ್ಲಿಕಟ್ಟೆ ಮಾರುಕಟ್ಟೆ ಉದ್ಘಾಟನೆಗೆ ಸಿದ್ದಗೊಂಡಿದ್ದು, ಅಂಗಡಿ ಕೋಣೆಗಳ ಟೆಂಡರ್‌ ಪ್ರಕ್ರಿಯೆ ಕೆಲವು ಅಂತಿಮಗೊಂಡಿದ್ದು, ಇನ್ನೂ ಕೆಲವು ಕೊನೆಯ ಹಂತದಲ್ಲಿದೆ ಎಂದರು.

ಕಾವೂರಲ್ಲಿ ಪಾರ್ಕಿಂಗ್‌: ಕಾವೂರಿನಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರ ತೆರವು ಮಾಡಿದ ಜಾಗದಲ್ಲಿ ಪಾರ್ಕ್ ಅಥವಾ ವಾಹನ ನಿಲುಗಡೆಗೆ ಪೇ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಉದ್ಯಮಿಗಳು ಮುಂದೆ ಬಂದಿದ್ದು, ಸದ್ಯದಲ್ಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ತೆರವು ಮಾಡಿದ ವ್ಯಾಪಾರಿಗಳಿಗೆ ಕಾವೂರು ಮಾರುಕಟ್ಟೆಬಳಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಮೇಯರ್‌ ಹೇಳಿದರು.ಟೈಗರ್‌ ಕಾರ್ಯಾಚರಣೆ ನಿರಂತರ: ಅನಧಿಕೃತ ಬೀದಿ ಬದಿ ವ್ಯಾಪಾರ ತೆರವು ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಈಗಾಗಲೇ ಟೈಗರ್‌ ಕಾರ್ಯಾಚರಣೆ ನಡೆಸಲಾಗಿದ್ದು, ಕೆಲವು ಕಡೆ ಮತ್ತೆ ಬೀದಿ ಬದಿ ವ್ಯಾಪಾರ ಆರಂಭವಾಗಿದೆ. ಇವುಗಳನ್ನು ತೆರವು ಮಾಡುವ ಕೆಲಸ ಮಾಡುತ್ತೇವೆ. ಟೈಗರ್‌ ಕಾರ್ಯಾಚರಣೆಗೆಂದು ಒಂದು ವರ್ಷಕ್ಕೆ ಟೆಂಡರ್‌ ನೀಡಲಾಗಿದ್ದು, ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತದೆ ಎಂದು ಮೇಯರ್‌ ಹೇಳಿದರು.

ರತೀಶ್‌ ಕುಲಶೇಖರ ಎಂಬವರು ಮಾತನಾಡಿ, ಬಿಜೈ ಭಾರತ್‌ ಮಾಲ್‌ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಕೆಲವು ಮಂದಿ ‘ನೋ ಪಾರ್ಕಿಂಗ್‌’ ಫಲಕ ಹಾಕಿದ್ದಾರೆ. ಕೆಲವೊಂದು ಅಂಗಡಿಗಳಿಗೆ ಸೀಮಿತಗೊಂಡು ಪಾರ್ಕಿಂಗ್‌ ಫಲಕ ಅಳವಡಿಸಿದ್ದಾರೆ ಇದನ್ನು ತೆರವು ಮಾಡಬೇಕು ಎಂದರು. ಇದಕ್ಕೆ ಉತ್ತರಿಸಿದ ಮೇಯರ್‌, ಈಗಾಗಲೇ ಟ್ರಾಫಿಕ್‌ ಪೊಲೀಸ್‌ ಇಲಾಖೆ ಸಭೆ ಕರೆದು ಚರ್ಚೆ ನಡೆಸಿದ್ದೇವೆ. ನಗರ ಪಟ್ಟಣ ಯೋಜನೆ ವಿಭಾಗದಿಂದ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗುವುದು ಎಂದರು.ತ್ಯಾಜ್ಯ ಪತ್ತೆಗೆ ಸರ್ವೇ: ನಗರದ ಪುರಾತನ ಗುಜ್ಜರಕೆರೆಗೆ ಒಳಚರಂಡಿ, ಕೊಳಚೆ ನೀರು ಸೇರುತ್ತಿದ್ದು, ನೀರು ಮಲಿನಗೊಂಡಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ನೇಮು ಕೊಟ್ಟಾರಿ ಒತ್ತಾಯಿಸಿದರು. ಮೇಯರ್‌ ಉತ್ತರಿಸಿ, ಈಗಾಗಲೇ ಎರಡು ಬಾರಿ ಪಾಲಿಕೆ ಸೇರಿದಂತೆ ಕುಡ್ಸೆಂಪ್‌ ಎಂಜಿನಿಯರ್‌ಗಳನ್ನು ಕಳುಹಿಸಿ ತ್ಯಾಜ್ಯ ನೀರನ್ನು ಕೆರೆಗೆ ಬಿಡುವ ಕುರಿತು ಪತ್ತೆ ಹಚ್ಚಲು ಕಳುಹಿಸಲಾಗಿತ್ತು. ಆದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ಎನ್‌ಐಟಿಕೆಯ ಎಂಜಿನಿಯರ್‌ಗಳಿಂದ ಪ್ರತ್ಯೇಕ ಸರ್ವೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉತ್ತರಿಸಿದರು.

ಉರ್ವಸ್ಟೋರ್‌ ಬಳಿಯ ಮಾರುಕಟ್ಟೆ ಶಿಥಿಲಗೊಂಡಿದ್ದು, ಹೊಸ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ವಿಶ್ವನಾಥ್‌ ಎಂಬವರು ಒತ್ತಾಯಿಸಿದರು.ಉಪ ಮೇಯರ್‌ ಸುನೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ವರುಣ್‌ ಚೌಟ, ಆಯುಕ್ತ ಆನಂದ್‌, ಉಪ ಆಯುಕ್ತ ರವಿ ಕುಮಾರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!