ಕನಕಗಿರಿ: ವಿಷಪೂರಿತ ಕಾಯಿ ಸೇವಿಸಿ 25 ಕುರಿಗಳು ಸ್ಥಳದಲ್ಲೇ ಅಸುನೀಗಿದ ಘಟನೆ ತಾಲೂಕಿನ ಚಿಕ್ಕವಡ್ರಕಲ್ ಸೀಮಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.ಗೌರಿಪುರ ಗ್ರಾಮದ ಸಣ್ಣ ದ್ಯಾಮಣ್ಣ ವಂಕಲಕುಂಟಿ ಎಂಬಾತ ಚಿಕ್ಕವಡ್ರಕಲ್ ಸೀಮಾ ವ್ಯಾಪ್ತಿಯಲ್ಲಿ ೯೦ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ತೆರಳಿದ್ದ. ಅಲ್ಲಿನ ವಿಷಪೂರಿತ ಕಾಯಿಯನ್ನು ಅತೀಯಾಗಿ ಸೇವಿಸಿದ್ದರಿಂದ ೨೫ ಕುರಿಗಳು ಸ್ಥಳದಲ್ಲಿ ಒದ್ದಾಡಿ ಮೃತಪಟ್ಟಿವೆ.ಮಾಹಿತಿ ತಿಳಿದ ಪಶು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಲು ಮುಂದಾದರು. ೯೦ ಕುರಿಗಳ ಪೈಕಿ ೨೫ ಮೃತಪಟ್ಟರೆ, ಇನ್ನುಳಿದ ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿ ಜೀವ ಉಳಿಸುವ ಪ್ರಯತ್ನ ಮಾಡಿದರು.ಈ ಕುರಿತು ಪಶು ಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಅರುಣ್ ಗುರು ಮಾತನಾಡಿ, ಕುರಿಗಳು ಮೇಯಿಸಲು ಹೋದಾಗ ವಿಷಪೂರಿತ ಕಾಯಿಗಳನ್ನು ಸೇವಿಸಿ ಕುರಿ ಮೃತಪಟ್ಟಿವೆ. ಕೆಲ ಕುರಿಗಳು ಸುಧಾರಿಸಿಕೊಳ್ಳುತ್ತಿದ್ದು, ಇನ್ನು ಕೆಲವು ಸಾವನ್ನಪ್ಪುವ ಸಾಧ್ಯತೆ ಇದೆ. ಕುರಿಗಳ ಜೀವ ಉಳಿಸಲು ತುರ್ತು ಆ್ಯಂಬುಲೆನ್ಸ್ ಕರೆತಂದು ಚಿಕಿತ್ಸೆ ನೀಡಲಾಗಿದೆ. ಅನುಗ್ರಹ ಕೊಡುಗೆ ಯೋಜನೆಯಡಿ ಸಾವನ್ನಪ್ಪಿದ ಪ್ರತಿ ಕುರಿಗೆ ₹೫ ಸಾವಿರ ಪರಿಹಾರ ನೀಡಲು ಅವಕಾಶವಿದೆ. ಈ ಕುರಿತಂತೆ ಉಣ್ಣೆ ಮತ್ತು ಕುರಿ ನಿಗಮಕ್ಕೆ ವರದಿ ಸಲ್ಲಿಸುವುದಾಗಿ ಅವರು ತಿಳಿಸಿದರು.ಕುರಿಗಾಹಿ ಜೀವ ಉಳಿಸಿದ ರೈತರು: 25 ಕುರಿಗಳು ಜೀವ ಬಿಡುತ್ತಿದ್ದಂತೆ ಕುರಿಗಾಯಿ ಸಣ್ಣ ದ್ಯಾಮಣ್ಣ ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ಗಮನಿಸಿದ್ದ ಅಕ್ಕಪಕ್ಕದ ರೈತರು ಓಡಿ ಬಂದು ರೈತನಿಗೆ ಧೈರ್ಯ ತುಂಬಿ ಕುರಿಗಾಹಿಯ ಪ್ರಾಣ ಉಳಿಸಿದ್ದಾರೆ ಎನ್ನುತ್ತಾರೆ ಗೌರಿಪುರ ಗ್ರಾಮಸ್ಥ ಲಕ್ಷ್ಮಣ.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರವಿ, ಗ್ರಾಮ ಲೆಕ್ಕಾಧಿಕಾರಿ ರಾಜು, ಪಿಡಿಒ ಅಮರೇಶ ರಾಠೋಡ, ಹುಲಿಹೈದರ ಪಶು ವೈದ್ಯ ಆಸ್ಪತ್ರೆ ರಶೀದ್, ಜಾನುವಾರು ಅಧಿಕಾರಿ ಲೋಕೇಶ ಬಿರಾದಾರ, ಗ್ರಾಪಂ ಅಧ್ಯಕ್ಷ ವೆಂಕಟೇಶ ತೊಗರಿ, ಸದಸ್ಯರಾದ ಮಾರುತಿ, ಬಸವರಾಜ ವರನಖೇಡ ಸೇರಿದಂತೆ ರೈತರು ಇದ್ದರು.