14ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶೇಖರಗೌಡ ಆಯ್ಕೆ

KannadaprabhaNewsNetwork |  
Published : Mar 16, 2026, 03:15 AM IST
ಪೋಟೊ15ಕೆಎಸಟಿ3: ಕೊಪ್ಪಳ ನಗರದ ಗಾಣಿಗ ಭವನದಲ್ಲಿ ಕೊಪ್ಪಳ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿದರು. ಶೇಖರಗೌಡ ಮಾಲಿಪಾಟೀಲ ಸರ್ವಾಧ್ಯಕ್ಷರಾಗಿ ಆಯ್ಕೆಯಾದವರು. | Kannada Prabha

ಸಾರಾಂಶ

ಸಾಹಿತ್ಯ ಸೇವೆ ಹಾಗೂ ಇತರೆ ರಂಗದಲ್ಲಿ ಸೇವೆ ಸಲ್ಲಿಸಿರುವ ಆಧಾರದಲ್ಲಿ ಮಾಲಿಪಾಟೀಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

ಕುಷ್ಟಗಿ: ತಾಲೂಕಿನ ಮುದೇನೂರು ಗ್ರಾಮದಲ್ಲಿ ಏಪ್ರಿಲ್‌ 2ನೇ ವಾರ ನಡೆಯಲಿರುವ ಕೊಪ್ಪಳ ಜಿಲ್ಲಾಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ತಾಲೂಕಿನ ಗುಮಗೇರಾ ಗ್ರಾಮದ ನಿವಾಸಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಕುಷ್ಟಗಿ ತಾಲೂಕಿನ ಪ್ರಪ್ರಥಮ ಕಾದಂಬರಿಕಾರ ಶೇಖರಗೌಡ ಮಾಲಿಪಾಟೀಲರನ್ನು ಆಯ್ಕೆ ಮಾಡಲಾಗಿದೆ.

ಕೊಪ್ಪಳ ನಗರದ ಗಾಣಿಗ ಸಮಾಜದ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಅಂತಿಮವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ಒಟ್ಟು ಆರು ಜನರ ಹೆಸರು ಆಯ್ಕೆ ಪ್ರಕ್ರೀಯೆಯಲ್ಲಿ ಇಡಲಾಗಿತ್ತು. ಸಾಹಿತ್ಯ ಸೇವೆ ಹಾಗೂ ಇತರೆ ರಂಗದಲ್ಲಿ ಸೇವೆ ಸಲ್ಲಿಸಿರುವ ಆಧಾರದಲ್ಲಿ ಮಾಲಿಪಾಟೀಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪರಿಚಯ: ಮೂಲತಃ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಕಸಾಪ ಜಿಲ್ಲಾಧ್ಯಕ್ಷರಾಗಿ ಗಂಗಾವತಿ ನಗರದಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ರಾಜ್ಯದ ಗಮನ ಸೆಳೆದು ಎಲ್ಲರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಡೆ ತಿರುಗಿ ನೋಡುವಂತೆ ಮಾಡಿದ್ದರು, ನಂತರ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ-ಸಂಸ್ಥೆಯ ಪ್ರತಿನಿಧಿಯಾಗಿ ಸೇವೆ ಮಾಡಿರುವ ಇವರು ಅನೇಕ ಕಾದಂಬರಿ ಬರೆದು ಸಹಕಾರ ರಂಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಸೇವೆ ಗುರುತಿಸಿ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡಿ ಗೌರವಿಸಿದ್ದು, ಈಗ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವದು ಕುಷ್ಟಗಿ ತಾಲೂಕಿನ ಹೆಮ್ಮೆಯಾಗಿದೆ.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯ ತೋಟಪ್ಪ ಕಾಮನೂರು, ರುದ್ರೇಶ ಆರಾಳ, ರಾಮಚಂದ್ರೇಗೌಡ ಗೊಂಡಬಾಳ, ಲೆಂಕೆಪ್ಪ ವಾಲಿಕಾರ, ರವೀಂದ್ರ ಬಾಕಳೆ,ಹೇಮಣ್ಣ ಕವಲೂರ, ಶೇಖರಗೌಡ ಮಾಲಿಪಾಟೀಲ, ಚನ್ನಬಸಪ್ಪ ಕಡ್ಡಿಪುಡಿ, ರಮೇಶ ತುಪ್ಪದ, ದೇವರಾಜ ವಿಶ್ವಕರ್ಮ, ಮಂಜುನಾಥ ಗುಳೇದಗುಡ್ಡ, ರಮೇಶ ಕುಲಕರ್ಣಿ ಸೇರಿದಂತೆ ಇತರರು ಹಾಜರಿದ್ದರು.

ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರೀಯಯಲ್ಲಿ ಸಾಹಿತಿಗಳಾದ ಶರಣಬಸಪ್ಪ ಕೋಲ್ಕಾರ, ಡಾ. ನಾಗರಾಜ ಹೀರಾ, ಶರಣಪ್ಪ ವಡಗೇರಿ, ಮಮತಾಜ್ ಬೇಗಂ, ಶೇಖರಗೌಡ ಮಾಲಿಪಾಟೀಲ, ಶರಣಪ್ಪ ಮೆಟ್ರಿ ಹೆಸರು ಕೇಳಿ ಬಂದಿದ್ದು, ಸಮಿತಿಯಲ್ಲಿ ಅಂತಿಮವಾಗಿ ಶೇಖರಗೌಡ ಮಾಲಿಪಾಟೀಲ ಆಯ್ಕೆಯಾದರು.

ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುದೇನೂರು ಗ್ರಾಮದಲ್ಲಿ ನಡೆಯಲಿದ್ದು, ಭಾನುವಾರ ಕೊಪ್ಪಳದಲ್ಲಿ ನಡೆದ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಡಾ. ಶೇಖರಗೌಡ ಮಾಲಿಪಾಟೀಲರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೂ.1ಕ್ಕೆ ಕನಕಗಿರಿಯಲ್ಲಿ ಕೋರ್ಟ್ ಆರಂಭಕ್ಕೆ ಸೂಚನೆ
ಹಾವೇರಿ ವಿವಿಯಲ್ಲಿ ಅಧ್ಯಯನ ಪೀಠ ಆರಂಭಕ್ಕೆ ಅವಕಾಶ-ಕುಲಪತಿ ಡಾ. ಸುರೇಶ