- ನೆರೆ ರಾಜ್ಯಕ್ಕೆ ನೀರು ಹರಿಸಿ ರೈತರಿಗೆ ಚಿಪ್ಪು ಕೊಟ್ಟ ಸರ್ಕಾರ: ಆಕ್ರೋಶ ಕನ್ನಡಪ್ರಭ ವಾರ್ತೆ ಮಂಡ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ಶುಕ್ರವಾರ ಮಂಡ್ಯದಲ್ಲಿ ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ಹೋರಾಟ ನಡೆಸಿದರು. ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನೆರೆದ ಸೇನೆಯ ಕಾರ್ಯಕರ್ತರು ಸಂಕಷ್ಟ ವರ್ಷದಲ್ಲೂ ನೆರೆ ರಾಜ್ಯಕ್ಕೆ ನೀರು ಹರಿಸಿ ರೈತರು ಮತ್ತು ಜನರ ಕೈಗೆ ಚಿಪ್ಪು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆಯೊಂದಿಗೆ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿ ಸ್ಥಳಕ್ಕೆ ತೆರಳಿ ಧರಣಿ ನಿರತರಾದರು. ಕರ್ನಾಟಕ- ತಮಿಳುನಾಡು ನಡುವೆ ಕಾವೇರಿ ಜಲವಿವಾದವಿರುವುದನ್ನು ಕಂಡೂ ಕೇಂದ್ರ ಸರ್ಕಾರ ಮೌನ ವಹಿಸಿದೆ. ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆಯೇ ವಿನಃ ಪರಿಹಾರ ಸೂಚಿಸಲು ಮುಂದಾಗುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಕರ್ನಾಟಕದ ಕಾವೇರಿ ಕಣಿವೆ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸದೆ, ನೀರನ್ನು ಸಂರಕ್ಷಣೆ ಮಾಡಲೂ ಆಗದೆ ಉದಾಸೀನ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ಕಾವೇರಿ ಕೊಳ್ಳದ ಜಲಾಶಯಗಳಿಂದ ಹರಿಸುತ್ತಿರುವ ನೀರನ್ನು ತಕ್ಷಣ ಸ್ಥಗಿತ ಮಾಡಬೇಕು, ಪ್ರಾಧಿಕಾರ ಮತ್ತು ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟು ರೈತರ ಕಾಪಾಡಬೇಕು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು, ಕಾವೇರಿ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಒತ್ತಾಯಿಸಿದರು. ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವ ವಹಿಸಿದ್ದರು.