ಧಾರವಾಡ:
ಶೆಲ್ ಇಂಡಿಯಾ ತನ್ನ ಪೆಟ್ರೋಲ್ ಬಂಕ್‌ಗಳಲ್ಲಿ ಕಿವುಡ, ಮೂಕರನ್ನು ಬಳಸಿಕೊಂಡು ಸೈಲೆಂಟ್ ಶಿಫ್ಟ್ ಎಂಬ ಕಾರ್ಯಕ್ರಮ ರೂಪಿಸಿ ಅವರಿಗೆ ಭದ್ರತೆ ಒದಗಿಸಿದೆ. ದೇಶದ ವಿವಿಧ ರಾಜ್ಯಗಳ ಪೈಕಿ ಪೂನಾ, ಧಾರವಾಡ ಹಾಗೂ ಬೆಂಗಳೂರಿನ ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ಕಳೆದ ಒಂದು ವರ್ಷದಿಂದ ಕಿವುಡ, ಮೂಕ ಸಿಬ್ಬಂದಿಗಳು ಎಂಟು ತಾಸುಗಳ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮ ಶುರುವಾಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ವರ್ಷಾಚರಣೆ ಆಚರಿಸಲಾಯಿತು.
ಈ ಬಂಕ್‌ನಲ್ಲಿ ಕಸ್ಟಮರ್ ಚಾಂಪಿಯನ್ ಆಗಿರುವ ಮಧುಸೂಧನ ಹೊಂಗಲ, ಸವಿತಾ, ಮಲ್ಲಿಕಾರ್ಜುನ ಹಾಗೂ ವಿನಾಯಕ ಎಂಬುವರು ಸಮರ್ಥನಂ ಸಂಸ್ಥೆಯಿಂದ ತರಬೇತಿ ಪಡೆದು ಒಂದು ವರ್ಷದಿಂದ ಸೈಲೆಂಟ್ ಶಿಫ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೈ ಮತ್ತು ಬಾಯಿ ಸನ್ನೆ ಮೂಲಕ ಗ್ರಾಹಕರ ಬೇಡಿಕೆ ಈಡೇರಿಸುತ್ತಿರುವ ಇವರು, ಪೆಟ್ರೋಲ್ ಅಥವಾ ಡೀಸೆಲ್ ಬೇಕೋ, ರಿಯಾಯ್ತಿ ಇದೆ, ಪೂರ್ಣ ಟ್ಯಾಂಕ್ ಬೇಕಾ? ಏರ್ (ಚಕ್ರಕ್ಕೆ ಗಾಳಿ) ಬೇಕಾ? ಅಂತಹ ಪ್ರಶ್ನೆಗಳ ಫಲಕ ಹಿಡಿದು ಸನ್ನೆ ಮೂಲಕ ಗ್ರಾಹಕರನ್ನು ನಿಭಾಯಿಸುತ್ತಿದ್ದಾರೆ.ಇಲ್ಲಿ ಒಂದು ವರ್ಷ ಕಾಲ ಸೇವೆ ಸಲ್ಲಿಸುತ್ತಿದ್ದು ಗ್ರಾಹಕರು ತಮ್ಮ ಚಿಹ್ನೆಗಳನ್ನು ಅರಿತು ಸ್ಪಂದಿಸುತ್ತಾರೆ. ಸಾಮಾನ್ಯ ಸಿಬ್ಬಂದಿಗಿಂತ ಹೆಚ್ಚು ತಮಗೆ ಸ್ಪಂದಿಸುತ್ತಿದ್ದು ಖುಷಿ ತಂದಿದೆ. ಜತೆಗೆ ಸಂಸ್ಥೆಯು ತಮಗೆ ಜೀವನದ ದಾರಿ ಮಾಡಿಕೊಟ್ಟಿದ್ದು ಧನ್ಯವಾದ ಎಂದು ಮಧುಸೂದನ ಹೊಂಗಲ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.
ಶೆಲ್ ಇಂಡಿಯಾ ಕಂಪನಿಯು ಈಗ 350ಕ್ಕೂ ಹೆಚ್ಚಿನ ಇಂಧನ ಮಾರಾಟ ಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳು ಇಂಧನ, ಕೆಫೆ, ಆಹಾರ ಮತ್ತು ಪಾನೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆ, ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಹೊಂದಿವೆ. ಇವೆಲ್ಲವನ್ನೂ ಈ ತಂಡವು ಯಾವುದೇ ಸಮಸ್ಯೆ ಇಲ್ಲದೇ ನಿರ್ವಹಿಸುತ್ತಿದ್ದು, ಸಾಮಾನ್ಯ ಸಿಬ್ಬಂದಿಗೆ ಇರುವ ಸಂಬಳ ಹಾಗೂ ಇತರೆ ಸೇವೆಗಳನ್ನು ಇವರಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.