ಬ್ಯಾಡಗಿ: ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆ. 15ಕ್ಕೆ ನೀಡಲು ನಿರ್ಧರಿಸಲಾಗಿದ್ದ ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಕೆಲ ದಿನಗಳ ಕಾಲ ಮುಂದೂಡಲಾಗಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಯರೇಶಿಮಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ. 15ರಂದು ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವಿಷಾದಿಸುತ್ತೇವೆ ಎಂದರು.
ಆಶ್ರಯ ನಿವೇಶನ ಪಡೆಯಲು 500ಕ್ಕೂ ಹೆಚ್ಚು ಮಂದಿ ನಿವೇಶನಕ್ಕೆ ₹30 ಸಾವಿರ ವಂತಿಕೆ ಹಣ ತುಂಬಿದ್ದಾರೆ, ಆದರೆ ಮಲ್ಲೂರ ರಸ್ತೆಯಲ್ಲಿ ಖರೀದಿ ಮಾಡಿದ ಜಾಗದಲ್ಲಿ ಕೇವಲ 417 ಜನರಿಗೆ ಮಾತ್ರ ನಿವೇಶನ ಹಂಚಿಕೆ ಸಾಧ್ಯ. ಈ ಹಿನ್ನೆಲೆಯಲ್ಲಿ ಮತ್ತೆ ಪಟ್ಟಣದ ಸುತ್ತ 20 ಎಕರೆ ಜಾಗ ಖರೀದಿಸಲು ಸರ್ಕಾರ ನಿರ್ಧರಿಸಿದ್ದು, ಉಳಿದ ಎಲ್ಲರಿಗೂ ನಿವೇಶನ ಹಂಚಿಕೆ ಮಾಡಲಿದ್ದೇವೆ ಎಂದರು.ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲು ಈ ಹಂತದಲ್ಲಿ ಸಾಧ್ಯವಿಲ್ಲ. ಒಂದು ವೇಳೆ ಹೆಸರುಗಳನ್ನು ಪ್ರಕಟಿಸಿದಲ್ಲಿ ಪಟ್ಟಿಯಿಂದ ಹೊರಗುಳಿದವರು ಅನಗತ್ಯವಾಗಿ ಶಿಫಾರಸು ಪತ್ರಗಳನ್ನು ತಂದಿಡುವ ಸಾಧ್ಯತೆ ಇರುವುದರಿಂದ ಏಕಕಾಲಕ್ಕೆ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಿದರು.
ಈ ವೇಳೆ ಸಮಿತಿ ಸದಸ್ಯರಾದ ದುರ್ಗೇಶ ಗೋಣೆಮ್ಮವರ, ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ಹನುಮಂತ ಬೊಮ್ಮಲಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.