ಗವಿಸಿದ್ದಪ್ಪ ಪ್ರಕರಣ ಎನ್‌ಐಎಗೆ ವಹಿಸಿ

KannadaprabhaNewsNetwork |  
Published : Aug 14, 2025, 01:00 AM IST
13ಕೆಪಿಎಲ್33 ಕೊಪ್ಪಳದಲ್ಲಿ ನಡೆದ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣವನ್ನು ಎನ್ ಐ ಎ ಗೆ ವಹಿಸುವಂತೆ ಆಗ್ರಹಿಸಿ ಜೆಡಿಎಸ್, ಬಿಜೆಪಿ ನಿಯೋಗದೊಂದಿಗೆ ಕುಟುಂಬಸ್ಥರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. | Kannada Prabha

ಸಾರಾಂಶ

ಕೊಪ್ಪಳದಲ್ಲಿ ನಮಗೆ ತೀವ್ರ ಒತ್ತಡ ಇತ್ತು. ಮುಸ್ಲಿಂ ಸಮುದಾಯದ ಹೆಸರು ಹೇಳಬೇಡಿ ಎಂದು ಒತ್ತಡ ಹಾಕಿದ್ದರು. ಮುಸ್ಲಿಂ ಸಮುದಾಯದ ಯುವಕನಿಂದಲೇ ಹತ್ಯೆಯಾಗಿದ್ದರೂ ಮುಸ್ಲಿಂ ಎಂದು ಹೇಳಬೇಡ ಎಂದು ಕೊಪ್ಪಳ ಶಾಸಕರ ಅನುಯಾಯಿಗಳು ಒತ್ತಡ ಹಾಕಿದ್ದರು ಎಂದು ಗವಿಸಿದ್ದಪ್ಪ ನಾಯಕ ತಂದೆ ನಿಂಗಜ್ಜ ಹೇಳಿದ್ದಾರೆ.

ಕೊಪ್ಪಳ:

ಮುಸ್ಲಿಂ ಯುವತಿ ಪ್ರೀತಿಸಿದ ಕಾರಣಕ್ಕೆ ಇತ್ತೀಚೆಗೆ ಕೊಲೆಯಾದ ಗವಿಸಿದ್ದಪ್ಪ ನಾಯಕ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ನಿಯೋಗದೊಂದಿಗೆ ಗವಿಸಿದ್ದಪ್ಪ ನಾಯಕ ಕುಟುಂಬಸ್ಥರು ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಬುಧವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಕೊಲೆ ಪ್ರಕರಣ ರಾಜ್ಯಪಾಲರ ಅಂಗಳ ತಲುಪಿದೆ.

ಸ್ಥಳೀಯವಾಗಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಅವರು ಒತ್ತಡಕ್ಕೆ ಒಳಗಾಗಬಹುದು. ಹೀಗಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂಲಕವೇ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಡಿಸಿಎಂ ಡಾ. ಅಶ್ವಥ್ ನಾರಾಯಣ, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ್ ರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕೋರ್ ಕಮಿಟಿ ಸದಸ್ಯ ಬಸವರಾಜ ಕ್ಯಾವಟರ್, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಜೆಡಿಎಸ್ ನಾಯಕ ಸಿ.ಬಿ. ಸುರೇಶ್ ಬಾಬು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು, ಮಾಜಿ ಶಾಸಕರು ಸಹ ನಿಯೋಗದಲ್ಲಿದ್ದು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ.

ಹೆಸರು ಹೇಳದಂತೆ ಒತ್ತಡ:

ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗವಿಸಿದ್ದಪ್ಪ ನಾಯಕ ತಂದೆ ನಿಂಗಜ್ಜ, ಕೊಪ್ಪಳದಲ್ಲಿ ನಮಗೆ ತೀವ್ರ ಒತ್ತಡ ಇತ್ತು. ಮುಸ್ಲಿಂ ಸಮುದಾಯದ ಹೆಸರು ಹೇಳಬೇಡಿ ಎಂದು ಒತ್ತಡ ಹಾಕಿದ್ದರು. ಮುಸ್ಲಿಂ ಸಮುದಾಯದ ಯುವಕನಿಂದಲೇ ಹತ್ಯೆಯಾಗಿದ್ದರೂ ಮುಸ್ಲಿಂ ಎಂದು ಹೇಳಬೇಡ ಎಂದು ಕೊಪ್ಪಳ ಶಾಸಕರ ಅನುಯಾಯಿಗಳು ಒತ್ತಡ ಹಾಕಿದ್ದರು. ಹೀಗಾಗಿಯೇ ರಾಜ್ಯಪಾಲರನ್ನು ಭೇಟಿಯಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಕೋರಿಕೊಂಡಿದ್ದೇವೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ