ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಶೆಟ್ಟಿಹಳ್ಳಿಯ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ದೇವಸ್ಥಾನಕ್ಕೆ ಬಳಸಿಕೊಳ್ಳುತ್ತಿರುವ 2 ಎಕರೆ 30 ಗುಂಟೆ ಜಾಗ ಇದೂವರೆಗೂ ದೇವಸ್ಥಾನದ ಹೆಸರಿಗೆ ಖಾತೆ ಆಗಿಲ್ಲ. ಹೀಗಾಗಿ ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಬರುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರದಿಂದ ಅನುದಾನ ಪಡೆದು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೂಡಲೇ ದೇವಸ್ಥಾನದ ಹೆಸರಿಗೆ ಜಮೀನನ್ನು ಖಾತೆ ಮಾಡಬೇಕು ಎಂದು ಗ್ರಾಮದ ಆಂಜನೇಯಸ್ವಾಮಿ ಭಕ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಈ ವೇಳೆ ಮಾತನಾಡಿದ ನಿವೃತ್ತ ಇಂಜಿನಿಯರ್ ಗುರುಸಿದ್ಧಪ್ಪ , ಶೆಟ್ಟಿಹಳ್ಳಿ ಆಂಜನೇಯಸ್ವಾಮಿಯನ್ನು ದ್ವಾಪರ ಯುಗದಲ್ಲಿ ಅರ್ಜುನ ಪ್ರತಿಷ್ಠಾಪನೆ ಮಾಡಿದನೆಂಬ ಪ್ರತೀತಿ ಇದೆ. ಈ ಪುರಾಣ ಪ್ರಸಿದ್ಧ ದೇವಸ್ಥಾನ ಹಂತಹಂತವಾಗಿ ಬೆಳವಣಿಗೆಯಾಗಿ ಇಂದು ಪ್ರಸಿದ್ಧಿಯಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ಜನ ಆಂಜನೇಯಸ್ವಾಮಿಯ ಭಕ್ತರಿದ್ದು, ಜಾತ್ರೋತ್ಸವ, ಶ್ರಾವಣ ಮಾಸದ ಪೂಜಾಕಾರ್ಯಕ್ರಮಗಳಲ್ಲಿ ಬಂದುಹೋಗುತ್ತಾರೆ. ಪ್ರತಿ ಶನಿವಾರ ನಡೆಯುವ ವಿಶೇಷ ಪೂಜಾಕೈಂಕರ್ಯಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಮುಜರಾಯಿ ಇಲಾಖೆಯ ಈ ದೇವಸ್ಥಾನ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ದೇವಸ್ಥಾನಗಳಲ್ಲೊಂದಾಗಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯಿಂದ 15 ಕೋಟಿ ರು.ಗಳ ಅಂದಾಜು ವೆಚ್ಚ ತಯಾರಿಸಲಾಗಿದ್ದು, ಆಂಜನೇಯಸ್ವಾಮಿ ಹೆಸರಿಗೆ ಖಾತೆ ಆಗದ ಕಾರಣ ಸರ್ಕಾರದಿಂದ ಅನುದಾನ ಮಂಜೂರು ಮಾಡಲು ಸಾಧ್ಯವಾಗದೆ ಅಭಿವೃದ್ಧಿ ಯೋಜನೆ ಕೈ ತಪ್ಪಿದೆ. ಈ ದೇವಸ್ಥಾನದ ಜಾಗ ಈಗಲೂ ಗೋಮಾಳ ಎಂದು ದಾಖಲೆಯಲ್ಲಿದೆ. ಇದನ್ನು ಆಂಜನೇಯಸ್ವಾಮಿ ಹೆಸರಿಗೆ ಮಾಡಿಕೊಡಬೇಕು. ಸರ್ಕಾರದ ವ್ಯಾಪ್ತಿಯ ದೇವಸ್ಥಾನದ ಜಮೀನನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಹೇಳಿದರು.
ಮತ್ತೊಬ್ಬ ಭಕ್ತರು, ಶೆಟ್ಟಿಹಳ್ಳಿ ಗ್ರಾಮದ ಮುಖಂಡ ರಾಮಚಂದ್ರ ನಾಯಕ್ ಮಾತನಾಡಿ, ಈ ಆಂಜನೇಯಸ್ವಾಮಿಯ ಭಕ್ತರಾದ ಬೆಂಗಳೂರಿನ ಲಿಂಗಣ್ಣ ಎಂಬುವವರು 50 ವರ್ಷಗಳ ಹಿಂದೆ ಸರ್ಕಾರದಿಂದ ಜಮೀನು ಪಡೆದು ಭಕ್ತರ ಉಪಯೋಗಕ್ಕೆಂದು ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದರು. ಆಗಿನಿಂದಲೂ ಲಿಂಗಣ್ಣನವರ ಕುಟುಂಬದವರು ಹಾಗೂ ದೇವಸ್ಥಾನದ ಸೇವಾ ಕಾರ್ಯಗಳಿಗೆ ಈ ಕಲ್ಯಾಣ ಮಂಟಪ ಬಳಸಿಕೊಂಡು ಬರಲಾಗುತ್ತಿದೆ. ಈ ಕಲ್ಯಾಣ ಮಂಟಪ ಶಿಥಿಲವಾಗಿದ್ದು ಮಳೆಗಾಲದಲ್ಲಿ ಸೋರುತ್ತದೆ. ದಾನಿಗಳ ನೆರವಿನಿಂದ ಈ ಕಟ್ಟಡದ ಒಂದು ಭಾಗದಲ್ಲಿ ಶೀಟಿನ ಛಾವಣಿ ಹಾಕಿಸಿ, ದಾಸೋಹದ ಅಡುಗೆ ಸಿದ್ಧಪಡಿಸಲು ಬಳಸಿಕೊಳ್ಳಲಾಗುತ್ತಿದೆ. ಆದರೆ ಇತ್ತೀಚೆಗೆ ಲಿಂಗಣ್ಣನವರ ಮಗ ವಾಸುದೇವ್ ಎಂಬುವವರು ಈ ಕಟ್ಟಡ ತಮಗೆ ಸೇರಿದ್ದು ಎಂದು ದೇವಸ್ಥಾನದ ಸೇವಾಕಾರ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಈ ವಿವಾದ ಬಗೆಹರಿಸಿ ಕಲ್ಯಾಣ ಮಂಟಪ ಜಾಗವನ್ನು ದೇವಸ್ಥಾನದ ಸುಪರ್ದಿಗೆ ಪಡೆಯಬೇಕು ಎಂದು ವಿನಂತಿ ಮಾಡಿದರು.ಗ್ರಾಮದ ಮುಖಂಡರಾದ ಮುಖಂಡ ಜಯಕೀರ್ತಿ ಟಿ.ಸಿ.ಜನಾರ್ಧನ್, ದೊಡ್ಡಹನುಮಂತಯ್ಯ, ಕುಮಾರಣ್ಣ, ಶಂಕರ್ ಮತ್ತಿತರ ಮುಖಂಡರು, ಭಕ್ತರು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ.