ಕಾಡಾ ಕಚೇರಿಯ ಹೊಲಗಾಲುವೆಯ ಹಸನಾಪುರ ಕಚೇರಿಯನ್ನು ವರ್ತಿಗೆ ಸ್ಥಳಾಂತರಿಸುವುದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವ ತಾಲೂಕು ಸಮಿತಿ ನೇತೃತ್ವದಲ್ಲಿ ಹಸನಾಪುರ ಕಚೇರಿ ಮುಂದೆ ಪ್ರತಿಭಟಿಸಿ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕಾರ್ಯನಿರ್ವಾಹಕ ಅಭಿಯಂತರ ಹೊಲಗಾಲುವೆ ವಿಭಾಗ, ಸಂಖ್ಯೆ-02 ಹಸನಾಪುರ ಕಚೇರಿಯನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸುವುದನ್ನು ರದ್ದುಪಡಿಸಿ ಪ್ರಸ್ತುತ ಇರುವ ಸ್ಥಳದಲ್ಲಿಯೇ ಕಚೇರಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಹಾಗೂ ಸಾಮೂಹಿಕ ನಾಯಕತ್ವ ತಾಲೂಕು ಸಮಿತಿ ನೇತೃತ್ವದಲ್ಲಿ ಹಸನಾಪುರ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿ ಭೀಮರಾಯನ ಗುಡಿಯ ಕೃಷ್ಣಾ ಕಾಡಾ ಆಡಳಿತಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹಲವಾರು ಮುಖಂಡರು, ಕೃಷ್ಣಾ ಕಾಡಾ ಪ್ರಾಧಿಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಅಭಿಯಂತರರು ಹೊಲಗಾಲುವೆ ವಿಭಾಗ ಸಂಖ್ಯೆ-02 ಕೃಭಾಜನಿನಿ ಹಸನಾಪೂರ ಕೇಂದ್ರಸ್ಥಾನದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ವರ್ತಿ ಗ್ರಾಮಕ್ಕೆ ಸ್ಥಳಾಂತರಿಸಲು ಈಗಾಗಲೇ ಆದೇಶಿಸಲಾಗಿದೆ. ಇದು ರೈತರ ಹೊಟ್ಟೆ ಹೊಡೆಯುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಸುಮಾರು 8 ತಾಲೂಕುಗಳ ರೈತರಿಗೆ ಕೃಷ್ಣಾ ಕಾಡಾ ಪ್ರಾಧಿಕಾರ ಕೃಷ್ಣಾ ಭಾಗ್ಯ ಜಲ ನಿಗಮ ಹಸನಾಪೂರ ಕೇಂದ್ರದಿಂದ ಅನುಕೂಲವಾಗಿತ್ತು. ಕಲ್ಯಾಣ ಕರ್ನಾಟಕ ಅತಿ ಹಿಂದುಳಿದ ಪ್ರದೇಶವಾಗಿದ್ದರಿಂದ ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಕರ್ನಾಟಕ ಸರ್ಕಾರವು ಮೊದಲ ಆದ್ಯತೆ ನೀಡಿದೆ. ಆದರೆ, ಹಸನಾಪುರ ಕಚೇರಿ ಸ್ಥಳಾಂತರ ಮಾತ್ರ ಅನ್ಯಾಯ ಬಗೆಯುತ್ತಿದೆ ಎಂದು ದೂರಿದರು.
ಯಾದಗಿರಿ ಜಿಲ್ಲೆಯ ಸುರಪುರ, ಹುಣಸಗಿ, ಶಹಾಪುರ, ವಡಗೇರಾ, ಗುರುಮಠಕಲ್ ತಾಲೂಕುಗಳು ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗೂರು, ಮಾನ್ವಿ ಸೇರಿ 8 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾರ್ಯಗಳನ್ನು ಈ ಕಾರ್ಯಾಲಯ ನಿರ್ವಹಿಸುತ್ತಿತ್ತು.
ಅಚ್ಚು ಕಟ್ಟೆ ರಸ್ತೆ, ಎನ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಕೊಳವೆಬಾವಿ ಕೊರೆಯುವ ಕಾರ್ಯಗಳನ್ನು ಹಾಗೂ ಚೆಕ್‌ಡ್ಯಾಂ, ಬಸಿಗಾಲುವೆ ಕಾರ್ಯಗಳನ್ನು ಕೈಗೊಳ್ಳುತ್ತಿತ್ತು. ಇದು ನಿಂತು ಹೋಗಿ ಪ್ರದೇಶಗಳು ಮತ್ತಷ್ಟು ಹಿಂದೆ ಜನಪ್ರತಿನಿಧಿಗಳೇ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ನಿಯಮ ಹಾಗೂ ಕಾನೂನು ಬಾಹಿರ ಆದೇಶ ತಕ್ಷಣವೇ ರದ್ದು ಪಡಿಸಬೇಕು. ಸರ್ಕಾರ ಮೊಂಡುತನ ಪ್ರದರ್ಶಿಸಿದರೆ ಸಾಂಕೇತಿಕವಾಗಿ ಮಾಡಿರುವ ಧರಣಿ ಬೇಡಿಕೆ ಈಡೇರುವವರೆಗೂ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತ್ರಾಯ ಚಂದಲಾಪುರ, ಮಲ್ಲಯ್ಯ ಕಮತಗಿ, ಶಿವಲಿಂಗ ಹಸನಾಪುರ, ವೆಂಕಟೇಶ ಬೇಟೆಗಾರ, ಸಾಹೇಬಗೌಡ ಮದಲಿಂಗನಾಳ, ಖಾಜಾ ಅಜ್ಮೀರ್, ಭೀಮಣ್ಣ ತಿಪ್ಪನಟಗಿ, ವೆಂಕಟೇಶಗೌಡ ಕುಪಗಲ್, ತಿಪ್ಪಣ್ಣ ಜಂಪಾ, ಇಮಾಮ್‌ಸಾಬ್ ಪಾಟೀಲ್, ಭೀಮನಗೌಡ ಕರ್ನಾಳ, ಮಾನಪ್ಪ ಕೊಂಬಿನ್, ದೇವೇಂದ್ರಪ್ಪ ತಿಪ್ಪನಟಗಿ, ಲೋಹಿತಕುಮಾರ ಮಂಗಿಹಾಳ, ನಾಗಪ್ಪ ಕುಪಗಲ್, ನಿಂಗನೌಡ, ದೇವಪ್ಪ ತಿಪ್ಪನಟಗಿ ಸೇರಿದಂತೆ ಇತರರಿದ್ದರು.