ಕ್ಯಾನ್ಸರ್‌ ಕಾಯಿಲೆ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮುಖ್ಯ

KannadaprabhaNewsNetwork | Published : Feb 6, 2024 1:38 AM

ಸಾರಾಂಶ

ಕ್ಯಾನ್ಸರ್ ಕಾಯಿಲೆಯಿಂದ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಯಾಗುತ್ತಲಿದ್ದು, ಕಾಯಿಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.

ಗದಗ: ಕ್ಯಾನ್ಸರ್ ಕಾಯಿಲೆಯಿಂದ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಯಾಗುತ್ತಲಿದ್ದು, ಕಾಯಿಲೆಯಲ್ಲಿ ಮುನ್ನೆಚ್ಚರಿಕೆ ಮತ್ತು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮುಖ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು. ಅವರು ಸೋಮವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಎನ್.ಸಿ.ಡಿ. ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಮ್ಸ್, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಮ್ಸ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜ್, ಸ್ಫೂರ್ತಿ ಪ್ಯಾರಾ ಮೆಡಿಕಲ್ ಕಾಲೇಜ್, ಮುನ್ಸಿಪಲ್ ಕಾಲೇಜ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಕ್ಯಾನ್ಸರ್ ಕಾಯಿಲೆಯಿಂದ ಸಾವು ಮತ್ತು ನೋವುಗಳು ಹೆಚ್ಚಾಗುತ್ತಿದ್ದು, ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಬದಲಾವಣೆಯಾದ ಆಧುನಿಕ ಜೀವನ ಶೈಲಿಯಿಂದ, ತಂಬಾಕು ಸೇವನೆ, ಮದ್ಯಪಾನ, ಅಹಿತಕರವಾದ ಆಹಾರ ಸೇವನೆಯಿಂದ, ಅಧಿಕ ತೂಕ ಹಾಗೂ ಮಾನಸಿಕ ಒತ್ತಡದಿಂದ ಹಾಗೂ ಹಲವಾರು ಕಾರಣಗಳಿಂದ ಬರುತ್ತಿದ್ದು, ಸಾರ್ವಜನಿಕರು ಜಾಗರೂಕರಾಗಿರಲು ತಿಳಿಸಿದರು.

ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಕ್ಯಾನ್ಸರ್ ರೋಗದಿಂದ ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 1.25 ಕೋಟಿ ಜನರು ತುತ್ತಾಗುತ್ತಿದ್ದು, ಅವರಲ್ಲಿ ಸುಮಾರು 90 ಲಕ್ಷ ರೋಗಿಗಳು ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ ಕ್ಯಾನ್ಸರ್ ರೋಗದಿಂದ ಪ್ರತಿ ವರ್ಷ ಸುಮಾರು 16 ಲಕ್ಷ ಜನರು ತುತ್ತಾಗುತ್ತಿದ್ದು, ಅವರಲ್ಲಿ ಸುಮಾರು 9 ಲಕ್ಷ ರೋಗಿಗಳು ಮರಣ ಹೊಂದುತ್ತಿದ್ದಾರೆ. ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗದ ಪರೀಕ್ಷೆಯ ವಿಧಾನವು ಸರಳವಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಮಾಡಿದ್ದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಾಯಿ, ಸ್ತನ ಹಾಗೂ ಗರ್ಭ ಕಂಠದ ಕ್ಯಾನ್ಸರ್ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ಕಾಯಿಲೆಗೆ ಪರಿಪೂರ್ಣ ಚಿಕಿತ್ಸೆ ಅವಶ್ಯವಿದ್ದು, ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿ ಧ್ವನಿಗೂಡಿಸಿ, ಒಟ್ಟಾಗಿ ಕ್ಯಾನ್ಸರ್ ಕಾಯಿಲೆಯನ್ನು ಹತೋಟಿಗೆ ತರಬಹುದು ಎಂದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅರುಂಧತಿ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೀತ ಖೋನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಡಾ. ಮಧುಮತಿ ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಜಿಮ್ಸ ಮೆಡಿಕಲ್, ನರ್ಸಿಂಗ್ ಕಾಲೇಜ್, ಸ್ಫೂರ್ತಿ ಪ್ಯಾರಾ ಮೆಡಿಕಲ್ ಕಾಲೇಜ್, ಮುನ್ಸಿಪಲ್ ಕಾಲೇಜ್‍ನ ವಿದ್ಯಾರ್ಥಿಗಳು ಭಾಗವಹಿಸಿದರು. ಎಸ್.ಎಸ್.ಪೀರಾ ನಿರೂಪಿಸಿದರು. ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಕುರಿತು ಜನಜಾಗೃತಿ ಮೂಡಿಸುವ ಹಿತದೃಷ್ಟಿಯಿಂದ ಜನಜಾಗೃತಿ ಜಾಥಾ ನಗರದ ಮುನ್ಸಿಪಲ್ ಜೂನಿಯರ್ ಕಾಲೇಜ ಆವರಣದಿಂದ ಪ್ರಾರಂಭವಾಗಿ, ಗಾಂಧೀ ವೃತ್ತ, ಮಹೇಂದ್ರಕರ ಸರ್ಕಲ್, ಟಾಂಗಾಕೂಟ ಮಾರ್ಗವಾಗಿ ಹಳೇ ಬಸ್ ನಿಲ್ಡಾಣ, ರೋಟರಿ ಸರ್ಕಲ್ ಮಾರ್ಗವಾಗಿ, ಹಳೇ ಜಿಲ್ಲಾ ಆಸ್ಪತ್ರೆ ವರೆಗೆ ಜರುಗಿತು.

Share this article