ಶಿಗ್ಗಾಂವಿ: ಇಲ್ಲಿಯ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷರಾಗಿ ಶಿದ್ದಾರ್ಥ ಹನುಮಂತಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶಾಂತಾಬಾಯಿ ಬ. ಸುಬೇದಾರ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಅ ವರ್ಗಕ್ಕೆ ಮೀಸಲಾಗಿದ್ದು ಬಿಜೆಪಿ ಸದಸ್ಯ ಶಾಂತಾಬಾಯಿ ಬ. ಸುಬೇದಾರ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಉಪಾಧ್ಯಕ್ಷೆಯನ್ನಾಗಿ ಆಯ್ಕೆಮಾಡಲಾಯಿತು.ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಶಿಗ್ಗಾಂವಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, ಬೆಳಗ್ಗೆ ಬಿಜೆಪಿ ಸದಸ್ಯರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದ ಶಿದ್ದಾರ್ಥ ಪಾಟೀಲ ಕೆಲವೇ ಪಕ್ಷೇತರ ಸದಸ್ಯರ ಬೆಂಬಲ ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆಯ್ಕೆ ಪ್ರಕ್ರಿಯೆ ನಡೆದಾಗ ಪಕ್ಷದ ೯ ಸದಸ್ಯರನ್ನು ಸೇರಿದಂತೆ ಎಲ್ಲಾ ೮ ಪಕ್ಷೇತರ ಸದಸ್ಯರ ಬೆಂಬಲ ಪಡೆಯುವ ಮೂಲಕ ಬಾರಿ ಬಹುಮತದ ಗೆಲುವನ್ನು ತಮ್ಮದಾಗಿಸಿಕೊಂಡು ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು.ಕಾಂಗ್ರೆಸ್ಸಿನ ಸದಸ್ಯ ವಸಂತಾ ಬಾಗೂರ ಅವರು ಪಕ್ಷದ ೬ ಸದಸ್ಯರನ್ನು ಸೇರಿದಂತೆ ಪಕ್ಷೇತರ ಬೆಂಬಲದೊಂದಿಗೆ ಪೈಪೋಟಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಬಹುಮತ ಸಾಬೀತು ಮಾಡುವಲ್ಲಿ ವಿಫಲರಾದರು.ಚುನಾವಣಾ ಅಧಿಕಾರಿ ಸಂತೋಷ ಹಿರೇಮಠ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಘೋಷಣೆ ಮಾಡಿ ಶುಭಾಶಯ ಕೋರಿದರು. ಪುರಸಭೆಯ ಕಾರ್ಯಾಲಯದ ಮುಂದೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಶುಭ ಕೋರಿದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮಾಜಿ ಪರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪಾ, ಶೇಖವ್ವಾ ಶಿಗ್ಗಾಂವ, ಜಾಫರ ಪಠಾಣ, ರೇಖಾ ಕಂಕನವಾಡ, ಜ್ಯೋತಿ ನಡೂರ, ಸುಭಾಸ ಚೌವ್ಹಾಣ, ಶ್ರೀಕಾಂತ ಬುಳ್ಳಕ್ಕನವರ, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ವಹಬೂಬಿ ನೀರಲಗಿ, ಮಂಜುನಾಥ ಬ್ಯಾಹಟ್ಟಿ, ಸುಲೇಮಾನಬಾಷಾ ತರ್ಲಘಟ್ಟ, ಅನುರಾಧಾ ಮಾಳ್ವದೆ, ಪರಶುರಾಮ ಸೊನ್ನದ, ಸಂಗೀತಾ ವಾಲ್ಮಿಕಿ. ಉಮೇಶ ಅಂಗಡಿ, ಮುತ್ತು ಯಲಿಗಾರ, ಪ್ರಶಾಂತ ಬಡ್ಡಿ ಇತರರಿದ್ದರು.ಶಿಗ್ಗಾಂವಿ ಪುರಸಭೆ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು ಸೇರಿದಂತೆ ಇತರ ಸಮಸ್ಯೆಗಳನ್ನು ಮುಂದಿನ ಆರು ತಿಂಗಳೊಳಗಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೆ ಧನ್ಯವಾದಗಳು ಪುರಸಭೆ ನೂತನ ಅಧ್ಯಕ್ಷ ಶಿದ್ದಾರ್ಥ ಪಾಟೀಲ ಹೇಳಿದರು.