ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮುಳುಗಡೆ ಪ್ರದೇಶದ ರೈತರಿಗೆ ಸಂಸದ ಬಿ. ವೈ.ರಾಘವೇಂದ್ರ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿಗೆ ಬೆಳಕುಕೊಟ್ಟ ಸಾವಿರಾರು ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಆದರೆ, ಅವರಿಗೆ ನ್ಯಾಯ ಕೊಡಬೇಕಾದ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಸಂಸದ ರಾಘವೇಂದ್ರ ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ. ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಇದೀಗ ಮುಳುಗಡೆ ಪ್ರದೇಶದ ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಸಂಸತ್‌ನಲ್ಲಿ ಒಂದು ಸ್ಟಾರ್ ಪ್ರಶ್ನೆ ಕೇಳಿದರು. ಅದಕ್ಕೆ ಕೇಂದ್ರ ಸರ್ಕಾರ ಸಚಿವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಡಿ ನೋಟಿಫಿಕೇಶನ್ ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಈ ಉತ್ತರ ಕೇಳಿ ನಮ್ಮ ಸಂಸದರು ಏನು ಹೇಳದೆ, ಮಾತನಾಡದೇ, ತಲೆ ಅಲ್ಲಾಡಿಸಿ ಕುಳಿತುಕೊಂಡಿದ್ದಾರೆ. ಇದು ಸಂಸದರಾಗಿ ಅವರು ಮಾಡುವ ಕೆಲಸವೇನು? ಸಚಿವರ ನಕಾರಾತ್ಮಕ ಉತ್ತರ ಕೇಳಿ ಸುಮ್ಮನೆ ಕುಳಿತುಕೊಳ್ಳುವುದಕ್ಕೇನು ಇವರು ಸಂಸದ ಆಗಿರುವುದು ಎಂದು ಪ್ರಶ್ನಿಸಿದರು.
ಒಕ್ಕೂಟದ ವ್ಯವಸ್ಥೆಯಲ್ಲಿ ಮುಳುಗಡೆಯಂತಹ ಸಮಸ್ಯೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರವೇ ಈ ಸಮಸ್ಯೆಗಳನ್ನು ಪರಿಹರಿಸಬೇಕು. ಸಂತ್ರಸ್ಥರಿಗೆ ನ್ಯಾಯ ಒದಗಿಸಬೇಕು. ಆದರೆ ಇದರಲ್ಲಿ ಸಂಸದ ರಾಘವೇಂದ್ರ ವಿಫಲರಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೂಡ ಸಂಸದರು ಕೇಂದ್ರದ ಮೇಲೆ ಒತ್ತಡ ತರಲು ವಿಫಲರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸ ಮಾಡಿದೆ. ಆದರೆ, ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.ಸಂಸದರು ಇದುವರೆಗೂ ರಾಜ್ಯ ಸರ್ಕಾರದ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿಲ್ಲ, ವರದಿಯನ್ನೂ ತರಿಸಿಕೊಂಡಿಲ್ಲ. ಸಂಸತ್ತಿನ ಅಧಿವೇಶನ ಇನ್ನೂ ನಡೆಯುತ್ತಿದೆ. ರೈತರ ಪರವಾಗಿ ಧ್ವನಿ ಎತ್ತಲಿ. ಇಲ್ಲದಿದ್ದರೆ, ಮುಳುಗಡೆ ರೈತರು ಸಂಸದ ರಾಘವೇಂದ್ರ ವಿರುದ್ಧ ದಂಗೆ ಏಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ವಕ್ತಾರ ಬಿ.ಎ.ರಮೇಶ್ ಹೆಗಡೆ ಮಾತನಾಡಿ, ಸಂಸದರು ಈ ಮೊದಲು ಸರ್ಕಾರವು ಪದೇ ಪದೆ ಅಡಕೆಯ ಮಾನ ತೆಗೆದರೂ ರಾಘವೇಂದ್ರ ಅವರು ಕೇಂದ್ರದ ಕ್ರಮಕ್ಕೆ ಯಾವುದೇ ಆಕ್ಷೇಪಣೆ ಮಾಡದೇ ಮೌನವಾಗಿದ್ದಾರೆ. ಕೇಂದ್ರ ಸಚಿವರು ಮತ್ತು ಕೆಲವು ಸಂಸದರು ಅಡಕೆ ಕ್ಯಾನ್ಸರ್ ಕಾರಕ ಎಂದು ಪದೇಪದೆ ಹೇಳಿಕೆ ನೀಡುತ್ತಿದ್ದಾರೆ. ಸಚಿವರಾದ ಅನುಪ್ರಿಯ ಪಟೇಲ್, ಅಶ್ವಿನ್‌ಕುಮಾರ್, ಸಂಸದ ನಿಶಿಕಾಂತ್ ದುಬೆ ಮುಂತಾದವರು ಅಡಕೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೂ ಕೇಂದ್ರ ಸರ್ಕಾರ ಸುಮ್ಮನೆ ಇದೆ ಎಂದರೆ ಏನರ್ಥ? ಸಂಸದರು ಕೂಡ ಮೌನವಾಗಿ, ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ಕೆಪಿಸಿಸಿ ಅಧ್ಯಕ್ಷ ವೈ. ಹೆಚ್. ನಾಗರಾಜ್, ಆಡಳಿತ ಉಸ್ತುವಾರಿ ಚಂದ್ರಭೂಪಾಲ್, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಧರ್ಮರಾಜ್, ಶಿ.ಜು.ಪಾಶ ಇದ್ದರು.
- - - ಟಾಪ್ ಕೋಟ್‌ಜಿಲ್ಲೆಯಲ್ಲಿ ಶರಾವತಿ, ಸಾವೆಹಕ್ಲು ಸೇರಿದಂತೆ ಮುಳುಗಡೆ ರೈತರ ಸಮಸ್ಯೆ ಸಾಕಷ್ಟಿದೆ. ಸುಪ್ರೀಂಕೋರ್ಟ್ ತೀರ್ಪುಗಳು ಬಂದಿವೆ. ಆದರೆ, ಈ ಸಮಸ್ಯೆಗಳನ್ನು ಬಗೆಹರಿಸುವ ಒಂದು ಗಂಭೀರ ಪ್ರಯತ್ನವನ್ನು ಸಂಸದರಾಗಿ ಬಿ.ವೈ.ರಾಘವೇಂದ್ರ ಮಾಡಿಲ್ಲ- ಆಯನೂರು ಮಂಜುನಾಥ್, ಕಾಂಗ್ರೆಸ್ ವಕ್ತಾರ
- - --13KPSMG05.jpg:
ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.