ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಷನ್ ಎಂಜಿನಿಯರಿಂಗ್ ವಿಭಾಗ, ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ತಾಂತ್ರಿಕ ಸ್ಪರ್ಧೆ ʼಪ್ಲಾಸ್ಮಾ-2024ʼ ಕಾರ್ಯಕ್ರಮ ರೊಬೋಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು.
ಕರ್ನಾಟಕದ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ 205 ಕ್ಕು ಹೆಚ್ಚು ತಂಡಗಳು ರೋಬೊಟಿಕ್ಸ್ ಸ್ಪರ್ಧೆಗಳಾದ ಡೆಡ್ ರೊಬೊ ರೇಸ್, ರೊಬೊ ಸಾಸರ್, ಸುಮೊ ವಾರ್, ಲೈನ್ ಫಾಲೊವರ್, ಹ್ಯಾಕಥಾನ್ನಲ್ಲಿ ಉತ್ಸುಕರಾಗಿ ಪಾಲ್ಗೊಂಡವು.ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಕ್ಯಾಡೆನ್ಸ್ ಸಿಸ್ಟಂ ಕಂಪನಿ ಡಿಸೈನ್ ಎಂಜಿನಿಯರ್ ಸಂಜಯ್.ಎ.ಸಿ ಮಾತನಾಡಿ, ಸವಾಲುಗಳನ್ನು ಎದುರಿಸಲು ಹೆಚ್ಚು ಆಸಕ್ತಿ ತೋರಿಸಿ. ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಅದೆಷ್ಟೊ ಕೌಶಲ್ಯತೆಗಳು ನಮ್ಮ ಉದ್ಯೋಗ ಬದುಕಿನಲ್ಲಿ ಕೈ ಹಿಡಿದಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ತೊಡಗಿಸಿಕೊಳ್ಳುವ ಮೂಲಕ ಹೊಸತನಕ್ಕೆ, ತಾಂತ್ರಿಕತೆಯ ವಿಕಸನದತ್ತ ಹೆಜ್ಜೆ ಹಾಕಲು ಸಹಕಾರಿಯಾಗಿದೆ ಎಂದು ಹೇಳಿದರು.
ಇಂದಿನ ಯುವ ಸಮೂಹದ ಅತಿ ದೊಡ್ಡ ಸವಾಲು ಎಂದರೆ, ಅದು ನಿರಂತರ ಕಲಿಕೆ. ಹೊಸ ತಂತ್ರಜ್ಞಾನಕ್ಕೆ ಕೌಶಲ್ಯತೆಗೆ ಉನ್ನತಿಕರಣ ಆಗಲೇ ಬೇಕಾದ ಅನಿವಾರ್ಯತೆ ನಿಮ್ಮ ಮೇಲಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ನಾವು ಕಲಿಕೆಯಲ್ಲಿ ಎಲ್ಲಿದ್ದೆವೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಸಂಸ್ಥೆಯ ಖಜಾಂಚಿಗಳಾದ ಡಿ.ಜಿ. ರಮೇಶ್, ಶೈಕ್ಷಣಿಕ ಡೀನ್ ಡಾ.ಪಿ. ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ, ಸಂಯೋಜಕರಾದ ಅನಿಲ್ ಕುಮಾರ್.ಜೆ, ಪ್ರದೀಪ್. ಎಸ್.ಸಿ, ಪ್ರಶಾಂತ್. ಜಿ.ಎಸ್, ವಿದ್ಯಾರ್ಥಿ ಸಂಯೋಜಕರಾದ ರಾಹುಲ್, ರೋಹಿತ್, ಚಿರಾಗ್, ಸುಶಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.