ನಾಳೆ ಶಿವಮೊಗ್ಗ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಬಿ.ಎಸ್‌.ರಕ್ಷಾ

KannadaprabhaNewsNetwork | Published : Dec 28, 2023 1:46 AM

ಸಾರಾಂಶ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಕಾರದಲ್ಲಿ ಡಿ.29ರಂದು ನಗರದ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಶಿವಮೊಗ್ಗ ತಾಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಮ್ಮೇಳನ ಅಧ್ಯಕ್ಷತೆ ಬಿ.ಎಸ್‌.ರಕ್ಷಾ ವಹಿಸಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಹಕಾರದಲ್ಲಿ ಡಿ.29ರಂದು ಬೆಳಗ್ಗೆ 10 ಗಂಟೆಗೆ ನಗರದ ಗುರುಪುರದಲ್ಲಿರುವ ಬಿಜಿಎಸ್ ಗುರುಕುಲ ಶಾಲೆ ಮತ್ತು ಕಾಲೇಜು ಆವರಣದಲ್ಲಿ ಶಿವಮೊಗ್ಗ ತಾಲೂಕು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಗುರುಪುರದ ಬಿ.ಜಿ.ಎಸ್. ಪ್ರೌಢಶಾಲಾ ವಿದ್ಯಾರ್ಥಿನಿ ಸಿದ್ದರಳ್ಳಿಯ ಎಸ್. ಬಿ‌.ರಕ್ಷಾ ಆಯ್ಕೆಯಾಗಿದ್ದಾರೆ. ಉದ್ಘಾಟಕರಾಗಿ ಡಿ.ವಿ.ಎಸ್. ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕು.ತೇಜಸ್ವಿ ಕೃಷ್ಣ ಭಾಗವಹಿಸಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ವಿಶ್ವಮಾನವ ದಿನದ ಸಂದೇಶ ಕುರಿತು ಸಾಹಿತಿ ಡಾ. ಎಚ್.ಟಿ. ಕೃಷ್ಣಮೂರ್ತಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಇಒ ಪಿ.ನಾಗರಾಜ್, ಬಿಜಿಎಸ್ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಡಿ.ವಿ. ಸತೀಶ್, ಜಿಲ್ಲೆಯ ಕನ್ನಡ ವಿಷಯ ಪರಿವೀಕ್ಷಕರಾದ ಕೆ. ಸತೀಶ್, ರಾಮಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೋಭಾ ವೆಂಕಟರಮಣ, ತಾಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ, ಬಿ‌.ಜಿ.ಎಸ್. ಗುರುಕುಲ ಶಾಲಾ ಮತ್ತು ಕಾಲೇಜು ಪ್ರಾಂಶುಪಾಲ ಎಸ್.ಎಚ್.ಸುರೇಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿವಿಧ ಗೋಷ್ಠಿಗಳು:

ಇದೇ ವೇಳೆ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕಥಾಗೋಷ್ಠಿಯು ಶ್ರೀ ಆದಿಚುಂಚನಗಿರಿ ಪ್ರೌಢಶಾಲಾ ವಿದ್ಯಾರ್ಥಿನಿ ವರ್ಷಾ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗೋಷ್ಠಿಯು ಅಧ್ಯಕ್ಷತೆ ಗಾಜನೂರು ಜವಾಹಾರ್ ನವೋದಯ ವಿದ್ಯಾಲಯದ ಸಹನಾ ವಹಿಸಲಿದ್ದಾರೆ. ಪ್ರಬಂಧ ಗೋಷ್ಠಿ ಅಧ್ಯಕ್ಷತೆ ಮಂಡಘಟ್ಟ ಸರ್ಕಾರಿ ಪ್ರೌಢಶಾಲಯ ಸ್ವಾತಿ ವಹಿಸಲಿದ್ದಾರೆ. ವಿಚಾರ ಗೋಷ್ಠಿ ಅಧ್ಯಕ್ಷತೆಯನ್ನು ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ನಿತ್ಯ ಎಂ. ಕುಲಕರ್ಣಿ ವಹಿಸಲಿದ್ದಾರೆ ಎಂದು ತಿಳಿಸಿದರು.

3 ವೇದಿಕೆಗಳು:

ತಾಲೂಕು ವ್ಯಾಪ್ತಿಯ ಸರ್ಕಾರಿ, ಖಾಸಗಿ ಪ್ರೌಢಶಾಲಾ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಬಾಲಕರ ಬಾಲಮಂದಿರದ ಮಕ್ಕಳು, ನವೋದಯ ವಿದ್ಯಾಲಯದ ಮಕ್ಕಳು ಸೇರಿದಂತೆ ಸುಮಾರು 220 ಮಕ್ಕಳು ತಾವು ಬರೆದ ಕಥೆ, ಕವನ, ಪ್ರಬಂಧ, ಚರ್ಚಾಗೋಷ್ಠಿಯಲ್ಲಿ ಭಾಗವಹಿಸುವರು. ಮೂರು ವೇದಿಕೆಗಳಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯಲಿದ್ದು, ಮಕ್ಕಳನ್ನು ಕರೆತರುವ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಿ.ಗಣೇಶ್, ಭೈರಾಪುರ ಶಿವಪ್ಪಗೌಡ, ಸೋಮಿನಕಟ್ಟಿ, ಎಸ್.ನಾರಾಯಣ, ಎಸ್. ಷಣ್ಮಖಪ್ಪ ಇದ್ದರು.

- - -

Share this article