ಚುನಾವಣೆ ನಡೆಸಲು ವಿಫಲ: ಶಿಂಷಾ ಬ್ಯಾಂಕ್‌ ಆಡಳಿತ ಮಂಡಳಿ ವಜಾ..!

KannadaprabhaNewsNetwork |  
Published : May 26, 2025, 12:06 AM IST
25ಕೆಎಂಎನ್ ಡಿ20 | Kannada Prabha

ಸಾರಾಂಶ

ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದೆ ಕರ್ತವ್ಯ ಲೋಪ ಮಾಡಿರುವ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಬ್ಯಾಂಕ್‌ಗೆ ಆಡಳಿತಕಾರಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಿಗದಿತ ಅವಧಿಯೊಳಗೆ ಚುನಾವಣೆ ನಡೆಸದೆ ಕರ್ತವ್ಯ ಲೋಪ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾಗೊಳಿಸಿರುವ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಆಡಳಿತಾಧಿಕಾರಿಯಾಗಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಧರಣೇಂದ್ರ ಕುಮಾರ್ ಅವರನ್ನು ಆರು ತಿಂಗಳ ಅವಧಿಗೆ ಆಡಳಿತ ಅಧಿಕಾರಿಯಾಗಿ ನೇಮಿಸಿ ಜಿಲ್ಲಾ ಸಹಕಾರ ಸಂಘಗಳ ಪ್ರಭಾರ ಉಪನಿಬಂಧಕ ಎಚ್.ಆರ್.ನಾಗಭೂಷಣ್ ಆದೇಶ ಹೊರಡಿಸಿದ್ದಾರೆ.

2020ರ ಮಾರ್ಚ್ 15ರಂದು ಶಿಂಷಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ನಡೆಸಲಾಗಿತ್ತು. ಆ ನಂತರ ಬ್ಯಾಂಕ್‌ನ ಅಧ್ಯಕ್ಷರು ಸಕಾಲದಲ್ಲಿ ಚುನಾವಣೆ ನಡೆಸದೆ ಕಳೆದ ಮಾರ್ಚ್ 27ರಂದು ವಿಳಂಬವಾಗಿ ಸರ್ವ ಸದಸ್ಯರ ಸಭೆಯನ್ನು ನಡೆಸಿದ್ದರು.

ಇದರಿಂದ ಸಹಕಾರ ಸಂಘಗಳ ನಿಯಮಾವಳಿ ಉಲ್ಲಂಘನೆಯಾಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ವಜಾ ಗೊಳಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಜಿಲ್ಲಾ ಉಪನಿಬಂಧಕರಿಗೆ ಆದೇಶ ನೀಡಿದ್ದರು. ಹೀಗಾಗಿ ಬ್ಯಾಂಕ್‌ನ ದೈನಂದಿನ ವ್ಯವಹಾರ ನಿರ್ವಹಿಸಲು ಅನುಕೂಲ ವಾಗುವಂತೆ ಆಡಳಿತಾಧಿಕಾರಿಯಾಗಿ ಧರಣೇಂದ್ರ ಕುಮಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಆದೇಶದ ಹಿನ್ನೆಲೆಯಲ್ಲಿ ಧರಣೇಂದ್ರ ಕುಮಾರ ಅಧಿಕಾರ ವಹಿಸಿಕೊಂಡಿದ್ದಾರೆ.ವಜಾಗೊಂಡಿದ್ದ ದಿವ್ಯಶ್ರೀ ಮರುನೇಮಕ

ಮದ್ದೂರು:

ಶಿಂಷಾ ಸಹಕಾರ ಬ್ಯಾಂಕ್‌ನ ಸಿಇಒ ಲಕ್ಷ್ಮಿ ನಾರಾಯಣ್ ಅವರ ಖಾತೆಗೆ ಅಕ್ರಮವಾಗಿ 6.50 ಲಕ್ಷ ರು. ಬ್ಯಾಂಕ್‌ನ ಹಣವನ್ನು ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಂಡಿದ್ದ ದಿವ್ಯಶ್ರೀ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಸಹಕಾರ ಸಂಘಗಳ ಪ್ರಭಾರ ಉಪನಿಬಂಧಕ ಎಚ್.ಆರ್.ನಾಗಭೂಷಣ್ ಹೊರಡಿಸಿರುವ ಆದೇಶ ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಿವ್ಯಶ್ರೀ ಅವರನ್ನು ಅಮಾನತ್ತು ಮಾಡಿದ ನಂತರ ಈ ಹಿಂದೆ ಬ್ಯಾಂಕ್‌ನ ಆಡಳಿತ ಮಂಡಳಿ ನಡೆಸಿದ ಗ್ರಾಹಕರ ಸ್ನೇಹಿ ತನಿಖೆಯಲ್ಲಿ (ಡೊಮೆಸ್ಟಿಕ್ ಎನ್ಕ್ವೈರಿ) ಆರೋಪ ಸಾಬೀತಾಗಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ವಜಾ ಆದೇಶ ಪ್ರಶ್ನಿಸಿ ದಿವ್ಯಶ್ರೀ ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿದ್ದರು. ಮೊಕದ್ದಮ್ಮೆ ವಿಚಾರಣೆ ಹಂತದಲ್ಲಿರುವಾಗಲೇ ರಾಜಕೀಯ ಒತ್ತಡಗಳಿಗೆ ಮಣಿದು ಬ್ಯಾಂಕ್‌ನ ಜೂನಿಯರ್ ಅಸಿಸ್ಟೆಂಟ್ ದಿವ್ಯಶ್ರೀ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಉಪನಿಬಂಧಕರಾದ ನಾಗಭೂಷಣ್ ಹೊರಡಿಸಿರುವ ಆದೇಶ ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಬ್ಯಾಂಕ್‌ನ ನಿಕಟ ಪೂರ್ವ ಅಧ್ಯಕ್ಷ ಎಂ.ಚಂದ್ರು ಗಂಭೀರ ಆರೋಪ ಮಾಡಿದ್ದಾರೆ.

ದಿವ್ಯಶ್ರೀ ಮರುನೇಮಕ ಆದೇಶದಿಂದ ಈಗಾಗಲೇ ಬ್ಯಾಂಕ್‌ನ ಹಲವು ಹಗರಣಗಳಲ್ಲಿ ಸಿಲುಕಿ ಅಮಾನತುಗೊಂಡಿರುವ ವ್ಯವಸ್ಥಾಪಕ ಉಮಾಶಂಕರ್, ಅಕೌಂಟೆಂಟ್ ಕುಮಾರ್, ಜೂನಿಯರ್ ಅಸಿಸ್ಟೆಂಟ್ ಚಿಕ್ಕಣ್ಣ ಅವರು ದಿವ್ಯಶ್ರೀ ಮರುನೇಮಕ ಮಾಡಿಕೊಂಡರೆ ತಮ್ಮನ್ನು ಪರಿಗಣಿಸುವಂತೆ ಅಥವಾ ದಿವ್ಯಶ್ರೀ ಮರು ನೇಮಕಕ್ಕೆ ತಡೆ ಆದೇಶ ನೀಡುವಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದಾಗಿ ಚಂದ್ರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ.1ರಿಂದ ಭೂರಹಿತರಿಂದ ಹೋರಾಟಕ್ಕೆ ನಿರ್ಣಯ
ಚಿನ್ನಕ್ಕಿಂತ ಆರೋಗ್ಯ, ನೆಮ್ಮದಿ ಮುಖ್ಯ: ಮಹಂತೇಶ್‌