ಶಿಂಷಾ ಎಡದಂಡೆ, ಬಲದಂಡೆ ನಾಲೆಗೆ ನೀರು ಸ್ಥಗಿತ: ವಿನೋದ್‌ಬಾಬು ಆರೋಪ

KannadaprabhaNewsNetwork | Published : Sep 1, 2024 1:51 AM

ಸಾರಾಂಶ

ಶಿಂಷಾ ಬಲದಂಡೆ ವ್ಯಾಪ್ತಿಗೆ ೩,೨೫೦ ಎಕರೆ ಹಾಗೂ ಎಡದಂಡೆ ವ್ಯಾಪ್ತಿಗೆ ೪,೪೦೦ ಎಕರೆ ಪ್ರದೇಶ ಬರಲಿದೆ. ಕಳೆದ ವರ್ಷ ಬೆಳೆಗಳಿಗೆ ನೀರು ಒಡಲು ಸಾಧ್ಯವಿಲ್ಲವೆಂದು ಹೇಳಿ ತಡವಾಗಿ ನೀರು ಕೊಟ್ಟು ಹುಸಿ ಬರ ಸೃಷ್ಟಿಸಿದ್ದರು. ಇದರಿಂದ ಅರ್ಧಭಾಗ ಬೆಳೆಯನ್ನೇ ಬೆಳೆಯಲಾಗಲಿಲ್ಲ. ಪ್ರತಿ ವರ್ಷ ನೀರು ಬಿಡುಗಡೆ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾಗಿದ್ದರೂ ಶಿಂಷಾ ಎಡದಂಡೆ-ಬಲದಂಡೆ ನಾಲೆಗಳಿಗೆ ನೀರು ಹರಿಸದೆ ಸ್ಥಗಿತಗೊಳಿಸಿರುವುದು ಭತ್ತದ ಸಸಿಮಡಿಗಳನ್ನು ಸಿದ್ಧಪಡಿಸಿಟ್ಟುಕೊಂಡು ನಾಟಿ ಮಾಡಲು ತಯಾರಿ ನಡೆಸಿರುವ ರೈತರಲ್ಲಿ ಆತಂಕ ಮೂಡಿಸಿದೆ ಎಂದು ಮದ್ದೂರು ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಲ್.ವಿನೋದ್‌ಬಾಬು ಹೇಳಿದರು.

ಶಿಂಷಾ ಬಲದಂಡೆ ವ್ಯಾಪ್ತಿಗೆ ೩,೨೫೦ ಎಕರೆ ಹಾಗೂ ಎಡದಂಡೆ ವ್ಯಾಪ್ತಿಗೆ ೪,೪೦೦ ಎಕರೆ ಪ್ರದೇಶ ಬರಲಿದೆ. ಕಳೆದ ವರ್ಷ ಬೆಳೆಗಳಿಗೆ ನೀರು ಒಡಲು ಸಾಧ್ಯವಿಲ್ಲವೆಂದು ಹೇಳಿ ತಡವಾಗಿ ನೀರು ಕೊಟ್ಟು ಹುಸಿ ಬರ ಸೃಷ್ಟಿಸಿದ್ದರು. ಇದರಿಂದ ಅರ್ಧಭಾಗ ಬೆಳೆಯನ್ನೇ ಬೆಳೆಯಲಾಗಲಿಲ್ಲ. ಪ್ರತಿ ವರ್ಷ ನೀರು ಬಿಡುಗಡೆ ವಿಚಾರದಲ್ಲಿ ಅನಿಶ್ಚಿತತೆ ಮುಂದುವರೆದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಬ್ಬರು ಶಾಸಕರು, ಮೂರು ಮಂದಿ ವಿಧಾನ ಪರಿಷತ್ ಸದಸ್ಯರಿದ್ದರೂ ಈ ಭಾಗದ ರೈತರ ಸಮಸ್ಯೆಯನ್ನು ಕೇಳೋರಿಲ್ಲ. ನೀರು ಹರಿಸುವುದಕ್ಕೆ ಜನಪ್ರತಿನಿಧಿಗಳು ಪ್ರಯತ್ನಿಸುತ್ತಲೂ ಇಲ್ಲ. ಈ ವರ್ಷ ಇದುವರೆಗೆ ನೀರು ಬಿಡುವ ಅಥವಾ ನೀರು ಬಿಡದಿರುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ರೈತರಿಗೆ ನೀಡಿಇಲ್ಲ. ಇತ್ತೀಚೆಗೆ ಒಂದು ಕಟ್ಟು ನೀರನ್ನು ಕೊಟ್ಟು ದಿಢೀರ್ ನಿಲ್ಲಿಸಿದ್ದಾರೆ. ಭತ್ತದ ಸಸಿ ಮಡಿ ಮಾಡಿಟ್ಟುಕೊಂಡು ನಾಟಿಗೆ ಗದ್ದೆಯನ್ನು ಹದ ಮಾಡಿಕೊಂಡಿರುವವರ ಮತ್ತು ನಾಟಿ ಮಾಡಿರುವವರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.

ಕೆಆರ್‌ಎಸ್ ಅಣೆಕಟ್ಟು ತುಂಬಿದ್ದರೂ ನೀರು ಬಿಡದಿರುವುದು ಸರಿಯಲ್ಲ. ಇಗ್ಗಲೂರು ಡ್ಯಾಂನಿಂದ ಚನ್ನಪಟ್ಟಣ ತಾಲೂಕಿಗೆ ನೀರು ನೀಡಲಾಗುತ್ತಿದೆ. ತಮಿಳುನಾಡಿಗೂ ನೀರು ಹರಿಸಲಾಗುತ್ತಿದೆ. ಹೀಗಿರುವಾಗ ಶಿಂಷಾ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಶಿಂಷಾ ಬಲದಂಡೆ ಮತ್ತು ಎಡದಂಡೆಗೆ ಹೇಮಾವತಿ ಮತ್ತು ಕೆಆರ್‌ಎಸ್ ಮೂಲಕ ನೀರು ಹರಿದುಬರಲಿದೆ. ಈಗ ಎರಡೂ ಕಡೆಯಿಂದಲೂ ನೀರನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ನೀರನ್ನು ಯಾವಾಗ ಹರಿಸುತ್ತಾರೆ, ಯಾವಾಗ ನಿಲ್ಲಿಸುತ್ತಾರೆಂಬ ಬಗ್ಗೆ ರೈತರಿಗೆ ಅಧಿಕಾರಿಗಳು ಮಾಹಿತಿಯನ್ನೇ ನೀಡುವುದಿಲ್ಲ. ದಿನಾಲೂ ರೈತರು ನೀರು ಬರುವುದನ್ನೇ ಎದುರುನೋಡುವಂತಾಗಿದೆ ಎಂದು ಬೇಸರದಿಂದ ನುಡಿದರು.

ಕೆಆರ್‌ಎಸ್ ಮತ್ತು ಹೇಮಾವತಿ ಎರಡರಿಂದಲೂ ಶಿಂಷಾ ನಾಲೆಗೆ ನೇರ ನೀರು ಸಂಪರ್ಕ ಕಲ್ಪಿಸಿ ಆ ಭಾಗದ ಜನರು ಹಿಂಗಾರು ಮತ್ತು ಮುಂಗಾರು ಬೆಳೆ ಬೆಳೆಯುವಂತೆ ಶಾಶ್ವತ ಪರಿಹಾರ ಒದಗಿಸಬೇಕು. ಈ ವರ್ಷ ನೀರು ಕೊಡಲು ಸಾಧ್ಯವಾಗದಿದ್ದರೆ ಈ ಪ್‌ರದೇಶವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಮತ್ತು ಈ ಭಾಗದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.

Share this article