ರಾಂ ಅಜೆಕಾರು ಕಾರ್ಕಳ: ಐದು ವರ್ಷದ ಬಾಲಕಿಯ ಮನದಲ್ಲಿ ಮೂಡಿದ ಪೈಲೆಟ್ ಆಗಬೇಕೆಂಬ ಕನಸು, ವರ್ಷಗಳ ಕಠಿಣ ಪರಿಶ್ರಮ, ಛಲ ಮತ್ತು ತಾಳ್ಮೆಯ ಮೂಲಕ ನನಸಾಗಿದೆ. ಕಾರ್ಕಳ ತಾಲೂಕಿನ ಕೌಡೂರು ರಂಗನಪಲ್ಕೆಯ ಶೈನಿ ಅಸ್ಮಾ ಸಲ್ಡಾನ ಅವರು ಪೈಲಟ್ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್ (ಸಿಪಿಎಲ್) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಕೌಡೂರು ರಂಗನಪಲ್ಕೆಯ ಅಶೋಕ್ ಜಾಕೋಬ್ ಸಲ್ಡಾನ ಮತ್ತು ಮರಿಯಾ ಗ್ರೆಟ್ಟಾ ಸಲ್ಡಾನ ದಂಪತಿ ಪುತ್ರಿ ಶೈನಿ ಅಸ್ಮಾ ಕಾರ್ಕಳದ ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೇ ವಿಭಿನ್ನವಾದ ಕನಸನ್ನು ಹೊಂದಿದ್ದ ಅವರು, ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೈಲಟ್ ತರಬೇತಿಗೆ ಅಗತ್ಯವಾದ ಪರೀಕ್ಷೆಗಳನ್ನು ಎದುರಿಸಿದರು.
ಬಾಲ್ಯದ ಕನಸು: ಪೈಲಟ್ ಆಗಬೇಕೆಂಬ ಕನಸು ಶೈನಿ ಅವರಲ್ಲಿ ಐದು ವರ್ಷದ ಬಾಲ್ಯದಲ್ಲೇ ಮೂಡಿತ್ತು. ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೂರಾರು ಮಂದಿ ಮೃತಪಟ್ಟ ಘಟನೆ ಬಾಲ್ಯದಲ್ಲಿ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಮೂಡಿದ ಕುತೂಹಲವೇ ಮುಂದೆ ಜೀವನದ ಗುರಿಯಾಗಿ ಪರಿವರ್ತನೆಯಾಯಿತು.
“ನಾನು ಐದು ವರ್ಷದವಳಿದ್ದಾಗ ಮಂಗಳೂರಿನಲ್ಲಿ ವಿಮಾನ ಅಪಘಾತ ಸಂಭವಿಸಿ ನೂರಾರು ಮಂದಿ ಮೃತಪಟ್ಟಿದ್ದರು. ಆ ಘಟನೆ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಆಗಲೇ ಪೈಲಟ್ ಆಗಬೇಕೆಂಬ ಕನಸು ಕಂಡಿದ್ದೆ. ಹಲವು ವರ್ಷಗಳ ಬಳಿಕ ಇಂದು ಆ ಕನಸು ನನಸಾಗಿದೆ” ಎಂದು ಶೈನಿ ಅಸ್ಮಾ ಸಾಧನೆಯ ಪ್ರೇರಣೆ ಹಂಚಿಕೊಂಡಿದ್ದಾರೆ.ಪೈಲಟ್ ತರಬೇತಿ ಸುಲಭದ ಹಾದಿಯಾಗಿರಲಿಲ್ಲ. ಸತತ ಪರಿಶ್ರಮ, ಶಿಸ್ತು, ತಾಂತ್ರಿಕ ಜ್ಞಾನ ಮತ್ತು ಮಾನಸಿಕ ಸಿದ್ಧತೆಯೊಂದಿಗೆ ತರಬೇತಿ ಪೂರ್ಣಗೊಳಿಸಿದ ಅವರು ವಿಮಾನ ಹಾರಾಟದ ಕೌಶಲ್ಯ, ಸುರಕ್ಷತಾ ಕ್ರಮಗಳು ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಹಾರಾಟದ ಅಭ್ಯಾಸವನ್ನು ಪೂರ್ಣಗೊಳಿಸಿರುವ ಅವರು, ಡಿಜಿಸಿಎಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ.