ಕನ್ನಡಪ್ರಭ ವಾರ್ತೆ ಕಾರವಾರ
ಸುಮಾರು 5,500 ಟನ್ ಬಿಟುಮಿನ್ ಹೊರುವ ಸಾಮರ್ಥ್ಯ ಹೊಂದಿರುವ ‘ಚೆಂಗ್ ಎಕ್ಸ್’ ಹೆಸರಿನ ಈ ಹಡಗು, 3,100 ಟನ್ ಬಿಟುಮಿನ್ (ಡಾಂಬರು) ಅನ್ನು ಹೊತ್ತು ಕಾರವಾರ ಬಂದರನ್ನು ತಲುಪಿದೆ. ಇರಾನ್ ಪಡೆಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವುದರಿಂದ, ಜಲಸಂಧಿಯ ಹೊರಭಾಗದಲ್ಲಿರುವ ಯುಎಇಯ ಕೋರ್ಫಕಾನ್ ಬಂದರಿನಿಂದ ಈ ಹಡಗು ಮಾ.3ರಂದು ಭಾರತದತ್ತ ತನ್ನ ಪ್ರಯಾಣ ಬೆಳೆಸಿತ್ತು. ಅತ್ಯಂತ ಅಪಾಯಕಾರಿ ಹಾಗೂ ಉದ್ವಿಗ್ನ ಸನ್ನಿವೇಶದಲ್ಲಿ ಕಡಲ ಮಾರ್ಗವನ್ನು ಸವೆಸಿರುವ ಈ ನೌಕೆ, ಕೊನೆಗೂ ನಿರಾಳವಾಗಿ ಕಾರವಾರದ ಕರಾವಳಿ ತಲುಪುವಲ್ಲಿ ಯಶಸ್ವಿಯಾಗಿದೆ.
ಸದ್ಯ ಕಾರವಾರದಲ್ಲಿ ಬಿಟುಮಿನ್ ಅನ್‌ಲೋಡ್ ಮಾಡುತ್ತಿರುವ ಈ ಹಡಗು, ಶುಕ್ರವಾರ ಸಂಜೆಯೇ ಮರಳಿ ಯುಎಇಗೆ ತನ್ನ ಪಯಣ ಬೆಳೆಸಬೇಕಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿರುವುದರಿಂದ ಹಾಗೂ ಸಮುದ್ರ ಮಾರ್ಗದಲ್ಲಿ ದಾಳಿಯ ಭೀತಿ ಹೆಚ್ಚಿರುವುದರಿಂದ, ಸುರಕ್ಷಿತವಾಗಿ ಯುಎಇಗೆ ವಾಪಸ್ ಹೋಗುವುದು ಹೇಗೆ ಎಂಬ ಚಿಂತೆ ಹಡಗಿನ ಸಿಬ್ಬಂದಿಯನ್ನು ಕಾಡಲಾರಂಭಿಸಿದೆ. ಸಿಬ್ಬಂದಿ ಆತಂಕದಲ್ಲೇ ಮುಂದಿನ ನಡೆಯ ಬಗ್ಗೆ ಯೋಚಿಸುತ್ತಿದ್ದಾರೆ.