ಕನ್ನಡಪ್ರಭ ವಾರ್ತೆ ಶಿರಾದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದ್ದು, ದಾಳಿಂಬೆ ಕ್ಲಸ್ಟರ್ ಯೋಜನೆಗೆ ಈ ತಾಲೂಕು ಆಯ್ಕೆಯಾಗಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಭಾರತವು ಹಣ್ಣುಗಳನ್ನು ಇತರೆ ದೇಶಗಳಿಂದ ಕೇವಲ ಆಮದು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮಲ್ಲಿಯೇ ರೈತರು ಹಣ್ಣುಗಳನ್ನು ಬೆಳೆದು ಹೊರ ದೇಶಗಳಿಗೆ ಮಾರಾಟ ಮಾಡಿ, ಹೆಚ್ಚು ಲಾಭ ಗಳಿಸಲಿ ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಹವಾಮಾನಕ್ಕೆ ಅನುಗುಣವಾಗಿ ದಾಳಿಂಬೆ ಬೆಳೆಗಾರರಿಗೆ ಅಧಿಕ ಆದಾಯ ಬರುವಂತೆ ಮಾಡುವುದು, ಮಾರುಕಟ್ಟೆ ಒದಗಿಸುವುದು ಕೂಡ ಈ ಯೋಜನೆಯ ಮುಖ್ಯಗುರಿಯಾಗಿದೆ ಎಂದರು.
ಒಟ್ಟು 5 ವರ್ಷಗಳ ಈ ಯೋಜನೆಗೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕ್ಯಾಪ್ಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ) ಹಾಗೂ ಎಐಸಿ ತ್ರಿಪಕ್ಷೀಯ ಸಹಯೋಗದಲ್ಲಿ ಚಾಲನೆ ನೀಡಲಾಗಿದೆ. ಮಳೆ ಕಡಿಮೆ ಬೀಳುವ ಪ್ರದೇಶಗಳು ದಾಳಿಂಬೆ ಬೆಳೆಗೆ ಸೂಕ್ತ ಎಂದು ಪರಿಗಣಿಸಲಾಗಿದ್ದು, ಅದರ ಜೊತೆಗೆ ಇಲ್ಲಿನ ಮಣ್ಣಿನ ಗುಣವು ಬೆಳೆಗೆ ಅನುಕೂಲಕರವಾಗಿದೆ. ರೈತರಿಗೆ ಶೇ.40ರಷ್ಟು ಸಬ್ಸಿಡಿ ದರದಲ್ಲಿ ಸಮಗ್ರ ಸೌಲಭ್ಯದ ಬೆಂಬಲ ಒದಗಿಸಲಾಗುತ್ತದೆ. ಒಟ್ಟಾರೆ, ಈ ಪ್ರದೇಶದಲ್ಲಿ 15,000 ಎಕರೆ ವಿಸ್ತೀರ್ಣವನ್ನು (ಸುಮಾರು 6000 ಹೆಕ್ಟೇರ್) ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಗುರಿಹಾಕಿಕೊಳ್ಳಲಾಗಿದೆ ಎಂದರು.ಎಐಸಿ ಸಮಾಲೋಚಕ ಮನೋಜ್ ಕುಶಾಲಪ್ಪ ಮಾತನಾಡಿ, ಯೋಜನೆಯಡಿ ರೈತರಿಗೆ ನಾಟಿಯಿಂದ ಮಾರುಕಟ್ಟೆವರೆಗೆ ತಲುಪಿಸಲು ಎಲ್ಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ‘ಸುರಕ್ಷಾ’ ಆಪ್ ಮೂಲಕ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ಹಾಗೂ ಹೊಸದಾಗಿ ಬೆಳೆಯುವ ರೈತರ ನೋಂದಣಿ ಮಾಡಿಕೊಳ್ಳುವುದು, ರೈತರ ಆದಾಯ ಹೆಚ್ಚಾಗಲು ಯೋಜನೆಯಡಿ ಮಣ್ಣು ಹಾಗೂ ನೀರಿನ ಪರೀಕ್ಷೆ, ರೋಗ ರಹಿತ ದಾಳಿಂಬೆ ಸಸಿ ನೀಡುವಿಕೆ, ರಸಗೊಬ್ಬರ, ಔಷಧಿ, ಹನಿನೀರಾವರಿ, ಟ್ರಾಕ್ಟರ್, ಟಿಲ್ಲರ್, ಸ್ಪ್ರೇಯರ್ ಸೇರಿದಂತೆ ಅಗತ್ಯ ಎಲ್ಲ ಆಧುನಿಕ ಯಂತ್ರೋಪಕರಣಗಳು ವಿತರಣೆ, ಬೆಳೆದ ದಾಳಿಂಬೆಯನ್ನು ಸೂಕ್ತ ಬೆಲೆಗೆ ಗ್ರಾಹಕರಿಗೆ ಮಾರುಕಟ್ಟೆ ತಲುಪಿಸುವ ಉದ್ದೇಶವನ್ನು ಎಐಸಿ ಹೊಂದಿದೆ ಎಂದರು.
ಸುಧಾಕರ್.ಎಚ್.ಎ, ಎಂ.ಚಂದ್ರಶೇಖರ್ ಹಾಜರಿದ್ದರು.