ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಒಟ್ಟು ೧೮ ಸದಸ್ಯರ ಪಪಂನಲ್ಲಿ ಕಾಂಗ್ರೆಸ್ ೧೧ ಸ್ಥಾನ ಹೊಂದಿದ್ದು, ಪೂರ್ಣ ಬಹುಮತ ಹೊಂದಿದೆ. ಬಿಜೆಪಿ ಕೇವಲ ೭ ಸದಸ್ಯರನ್ನು ಹೊಂದಿದೆ. ಈಗ ಅಧ್ಯಕ್ಷ ಸ್ಥಾನ ಸಾಮಾನ್ಯವಾಗಿರುವುದರಿಂದ ಅಚ್ಚರಿಯ ರೀತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಓರ್ವ ಎಸ್ಸಿ ಮಹಿಳೆ ಮತ್ತು ಓರ್ವ ಅಲ್ಪ ಸಂಖ್ಯಾತ ಮಹಿಳೆಯ ಹೆಸರು ಮುನ್ನೆಲೆಗೆ ಬಂದಿದೆ.
ಶಿರಹಟ್ಟಿ ಪಪಂ ಆದ ನಂತರ ಇಲ್ಲಿಯವರೆಗೂ ಅಧ್ಯಕ್ಷ ಸ್ಥಾನ ಈ ಎರಡು ವರ್ಗದ ಮಹಿಳೆಯರಿಗೂ ಲಭಿಸಿಲ್ಲ. ಇದೇ ಮೊದಲ ಬಾರಿ ಎಸ್ಸಿ ಮಹಿಳೆ ಮತ್ತು ಅಲ್ಪಸಂಖ್ಯಾತ ಮಹಿಳೆ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೊರಗೆಡವಿದ್ದು, ಇದು ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ ಎನ್ನಬಹುದು. ಇವರಿಬ್ಬರಲ್ಲದೇ ಮತ್ತೋರ್ವ ಕಾಂಗ್ರೆಸ್ ಸದಸ್ಯೆ ನೀಲವ್ವ ಹುಬ್ಬಳ್ಳಿ ಕೂಡ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೊಡ್ಡುವ ಲಕ್ಷಣ ಕಂಡುಬರುತ್ತಿವೆ.ಕಾಂಗ್ರೆಸ್‌ನಲ್ಲಿ ನೀಲವ್ವ ಹುಬ್ಬಳ್ಳಿ, ಗಂಗವ್ವ ಆಲೂರ ಮಹಿಳಾ ಸದಸ್ಯರು ಮೊದಲ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದು, ಈ ಅವಕಾಶ ನಮಗೆ ಕೈ ತಪ್ಪಬಾರದು ಎನ್ನುವ ಕಾರಣದಿಂದ ವಾರ್ಡ್ ನಂ.೧೫ ರಿಂದ ಆಯ್ಕೆಯಾದ ದೇವಕ್ಕ ಗುಡಿಮನಿ ಮತ್ತು ವಾರ್ಡ್ ನಂ ೧೧ರಿಂದ ಆಯ್ಕೆಯಾದ ದಾವಲಬಿ ಮಾಚೇನಹಳ್ಳಿ ಇವರಿಬ್ಬರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ, ನಮಗೂ ಒಂದು ಅವಕಾಶ ನೀಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಮುಖಂಡರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಜಿಲ್ಲೆಯಲ್ಲಿ ಎಚ್.ಕೆ. ಪಾಟೀಲರ ಪ್ರಭಾವ ಮತ್ತು ಶಕ್ತಿಯಿಂದ ಸದಸ್ಯರ ಕುದುರೆ ವ್ಯಾಪಾರ ಅಸಾಧ್ಯ. ಆದರೆ ಕಾಂಗ್ರೆಸ್‌ನಲ್ಲಿಯೂ ಅಸಮಾಧಾನದ ಹೊಗೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರು ಹೆಚ್ಚು ಆಸಕ್ತಿ ತೋರದೇ ಹೋದರೆ ಮತ್ತೊಮ್ಮೆ ಪಪಂ ಬಿಜೆಪಿ ತೆಕ್ಕೆಗೆ ಸೇರುವುದು ನಿಶ್ಚಿತ.
ಕಾಂಗ್ರೆಸ್ ಪೂರ್ಣ ಬಹುಮತ ಹೊಂದಿದೆ. ನಾಲ್ಕು ಜನ ಮಹಿಳಾ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಉಳ್ಳವರಿರುವುದರಿಂದ ಪಕ್ಷದ ಹಿರಿಯರ ಗಮನಕ್ಕೆ ತಂದು ಯಾವುದೇ ಗೊಂದಲಕ್ಕೆ ಅಸ್ಪದ ಬರದಂತೆ ಅಧಿಕಾರ ಹಂಚಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ ತಿಳಿಸಿದ್ದಾರೆ.