ಶಿರಾಳಕೊಪ್ಪದ ಸರ್ಕಾರಿ ಶಾಲೆಗೆ ಹೊಸ ರೂಪ

KannadaprabhaNewsNetwork |  
Published : Jun 10, 2025, 09:48 AM IST
 ಹೊಸರೂಪ ನೀಡಿದ ಶಾಲಾ ಆಡಳಿತ ಮಂಡಳಿ.- | Kannada Prabha

ಸಾರಾಂಶ

ಶಿಕಾರಿಪುರ ತಾಲೂಕಲ್ಲಿ ಮೊದಲು ಪ್ರಾರಂಭವಾದ ಶಿರಾಳಕೊಪ್ಪ ಸ.ಪ.ಪೂ ಕಾಲೇಜಿನ ಪ್ರೌಢಶಾಲೆಯು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳು ಶಿಕ್ಷಣ ಪಡೆದ ಕೀರ್ತಿ ಹೊಂದಿದ್ದರೂ ಶಾಲೆ ಬಣ್ಣ ಸುಣ್ಣವಿಲ್ಲದೇ ಸೊರಗಿದಂತೆ ಕಾಣುತ್ತಿತ್ತು.

ಮಾದರಿ ನಡೆ । ಶಾಲಾ ಆಡಳಿತ ಮಂಡಳಿ, ಶಿಕ್ಷಕರಿಂದ ಸ್ಕೂಲ್‌ ಕಟ್ಟಡಕ್ಕೆ ಬಣ್ಣ । ಮಾಜಿ ಸಿಎಂ ಎಸ್‌.ಬಂಗಾರಪ್ಪ ಓದಿದ್ದ ಶಾಲೆ

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ

ಸರ್ಕಾರಿ ಶಾಲೆ ಗಳೆಂದರೆ ಪೋಷಕರು ಮೂಗುಮುರಿಯುವ ದಿನಗಳಲ್ಲಿ ಸರ್ಕಾರದ ನಿರ್ಲಕ್ಷ್ಯವೋ ಅಥವಾ ಅನುದಾನದ ಕೊರತೆಯಿಂದಲೋ ಬಣ್ಣ ಸುಣ್ಣ ಕಾಣದೇ ಪಾಳು ಬಿದ್ದ ಮನೆಯಂತೆ ಕಾಣುತ್ತವೆ. ಆದರೆ ಶಾಲೆಗೆ ಹೊಸ ರೂಪ ಕೊಡುವ ದೃಢ ಸಂಕಲ್ಪ ತೊಟ್ಟು,ಸಂಪೂರ್ಣ ಶಾಲೆಗೆ ಬಣ್ಣ ಹೊಡೆಸುವ ಮುಖಾಂತರ ಹೊಸ ರೂಪ ನೀಡುವಲ್ಲಿ ಶಿರಾಳಕೊಪ್ಪ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ರಾಜ್ಯದ ಇತರ ಶಾಲೆಗಳಿಗೆ ಮಾದರಿ ಆಗಿದ್ದಾರೆ.

ಸಾಕಷ್ಟು ಇತಿಹಾಸ ಹೊಂದಿರುವ ಶಿಕಾರಿಪುರ ತಾಲೂಕಲ್ಲಿ ಮೊದಲು ಪ್ರಾರಂಭವಾದ ಶಿರಾಳಕೊಪ್ಪ ಸ.ಪ.ಪೂ ಕಾಲೇಜಿನ ಪ್ರೌಢಶಾಲೆಯು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ ಹಲವಾರು ಮಹಾನ್ ವ್ಯಕ್ತಿಗಳು ಶಿಕ್ಷಣ ಪಡೆದ ಕೀರ್ತಿ ಹೊಂದಿದ್ದರೂ ಶಾಲೆ ಬಣ್ಣ ಸುಣ್ಣವಿಲ್ಲದೇ ಸೊರಗಿದಂತೆ ಕಾಣುತ್ತಿತ್ತು.

ಆದರೂ ಸಹ ಈ ಶಾಲೆ ಉತ್ತಮ ಹೆಸರು ಪಡೆದಿದೆ. ಈ ಶಾಲೆಗೆ ಮಕ್ಕಳು ಸೇರಲು ಪೈಪೋಟಿ ನಡೆಸಬೇಕಿದೆ. ಇಲ್ಲಿಯ ಇಂಗ್ಲೀಷ್ ಮೀಡಿಯಂ ಶಾಲೆ ಪ್ರತಿ ವರ್ಷ ದಾಖಲೆಯ ಫಲಿತಾಂಶ ಪಡೆಯುತ್ತಿದೆ. ಸರ್ಕಾರದ ಅನುದಾನವಿಲ್ಲದಿದ್ದರೂ ಈ ಬಾರಿ ಶಾಲೆಗೆ ಬಣ್ಣ ಹೊಡೆಸಲೇಬೇಕು ಎಂದು ನಿಶ್ಚಯ ಮಾಡಿ ಶಾಲಾ ಸಮಿತಿಯ ಅಧ್ಯಕ್ಷ ಬಸವರಾಜ್ ಅಕ್ಕಿ ಅವರ ನೇತ್ರತ್ವದಲ್ಲಿ ಸಮಿತಿಯ ಸದಸ್ಯರು ಹೆಜ್ಜೆಯಿಟ್ಟಿದ್ದರು.

ಎಸ್‌ಡಿಎಂಸಿ ತಂಡ ಯೋಚನೆ ಮಾಡಿ ಮೊದಲು ಪಟ್ಟಣದಲ್ಲಿಯ ಬಣ್ಣದ ಅಂಗಡಿಗಳ ಮಾಲಿಕರ ಬಳಿ ತೆರಳಿ ಮನವೊಲಿಸಿ ಸಾಕಷ್ಟು ಬಣ್ಣ ಸಂಗ್ರಹಿಸಿತು. ನಂತರ ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಮಂಚಿ ಶಿವಣ್ಣ, ಮುತ್ತು ಗೌಡರು, ರವಿ ಶಾನುಭೋಗ, ನಿವೃತ್ತ ಶಿಕ್ಷಕಿ ಶಾಕುಂತಲಮ್ಮ, ಹಾಲೇಶ್, ಗಂಗಾಧರ್,ಮಂಜುನಾಥ್‌ ಇತರ ದಾನಿಗಳಿಂದ ಬಣ್ಣದ ಟಿನ್ ಪಡೆದು ಬಣ್ಣ ಹಚ್ಚಿಸಲು ಮುಂದಾಯಿತು.

ಆದರೆ ಬಣ್ಣ ಹಚ್ಚಲು ೫೦ ಸಾವಿರ ರು.ಗೂ ಹೆಚ್ಚು ಹಣವನ್ನು ಕೇಳಿದ ಪೇಂಟರ್‌ಗಳ ಮಾತುಕೇಳಿ ಎಸ್‌ಡಿಎಂಸಿ ಸದಸ್ಯರೇ ಬಣ್ಣ ಹಚ್ಚಲು ಮುಂದಾಗಿ ತಾವೇ ಹಳೇ ಬಟ್ಟೆ ತೊಟ್ಟು ಶಾಲೆಗೆ ಬಣ್ಣ ಹೊಡೆದರು. ಸದಸ್ಯರಾದ ದ್ಯಾವಪ್ಪ, ಹಾಲೇಶಪ್ಪ, ಬಸವರಾಜಪ್ಪ ಸಿ.ಕೆ., ಆಶಾ ಮಂಜುನಾಥ, ಶಿವಲೀಲಾ, ನಾಗರಾಜ್, ಅನ್ನಪೂರ್ಣ, ಸಿಬ್ಬಂದಿ ಪ್ರಸಾದ್ ಮತ್ತು ಪ್ರಶಾಂತ್ ಸಹಕಾರ ನೀಡಿದರು.

ಶಾಲೆ ಪ್ರಾರಂಭವಾಗುವ ಮೊದಲೇ ಮುಗಿಸಬೇಕು ಎಂಬ ಉದ್ದೇಶದಿಂದ ಹಗಲು-ರಾತ್ರಿ ಎಲ್ಲ ಕೆಲಸ ಮಾಡಿ ಹೊಸರೂಪ ನೀಡುವಲ್ಲಿ ಸಫಲರಾದರೆ ನಾವೇನು ಕಡಿಮೆ ಎನ್ನುವಂತೆ ಮುಖ್ಯ ಶಿಕ್ಷಕ ನಾಗರಾಜ್‌ ಎಸ್.ವೈ. ಮತ್ತು ಶಿಕ್ಷಕರು ಶಾಲೆಯ ಮೇಲೆಹತ್ತಿ ಒಡೆದ ಹಂಚುಗಳನ್ನು ತೆಗೆದು ಹಾಕಿ ಹೊಸ ಹೆಂಚು ಹಾಕಿ ಸಮಿತಿಯೊಂದಿಗೆ ಶಿಕ್ಷಕ ವೃಂದ ಕೈಜೋಡಿಸಿ ಶಾಲೆಗೆ ಹೊಸ ರೂಪ ಕೊಡುವಲ್ಲಿ ಯಶಸ್ವಿ ಆಗಿದೆ. ರಾಜ್ಯದ ಇತರ ಶಾಲೆಗಳಿಗೆ ಇದು ಮಾದರಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?