ಉಡುಪಿ: ಶಿರೂರು ಮಠದ ಪರ್ಯಾಯೋತ್ಸವ ಮೆರವಣಿಗೆಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಭಗವಧ್ವಜವನ್ನು ಬೀಸಿ ಚಾಲನೆ ನೀಡಿದ್ದರ ವಿರುದ್ಧ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಪ್ರಗತಿಪರ ಸಂಘಟನೆಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿವೆ.
ಸಹಬಾಳ್ವೆ ವಿರೋಧ: ಜಿಲ್ಲಾಧಿಕಾರಿ ಅಥವಾ ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಲೇ ಬೇಕು. ಉಡುಪಿ ಜಿಲ್ಲಾಧಿಕಾರಿ ತಮ್ಮ ನಡೆಯಲ್ಲಿ ಬೇರೆ ರಾಜಕೀಯ ಹಿತಾಸಕ್ತಿ ಇರಲಿಲ್ಲ ಎಂದಿದ್ದಾರೆ. ಆದರೆ ಜಿಲ್ಲಾಡಳಿತದ ಪರವಾಗಿ ಭಾಗವಹಿಸಿದಾಗ ಅವರಿಗೆ ಸಾಂವಿಧಾನಿಕ ನಿಯಮಗಳನ್ನು ಪಾಲಿಸಬೇಕು ಎಂಬ ಜಾಗೃತಿ ಇರಬೇಕಿತ್ತು, ಸಂವಿಧಾನ ವಿರೋಧಿ ಸಂಘಟನೆಯ ಧ್ವಜವನ್ನು ನಿರಾಕರಿಸಬೇಕಿತ್ತು. ಜಿಲ್ಲಾಧಿಕಾರಿಯವರ ಸಂವಿಧಾನ ನಿಯಮ ಬಾಹಿರ ವರ್ತನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಸಹಬಾಳ್ವೆ ಸಂಘಟನೆಯ ಸಂಚಾಲಕ ಕೆ. ಫಣಿರಾಜ್ ಆಗ್ರಹಿಸಿದ್ದಾರೆ.