ಶಿರೂರು ಪರ್ಯಾಯೋತ್ಸವ: 14ರಂದು ಧಾನ್ಯ ಮುಹೂರ್ತ

KannadaprabhaNewsNetwork |  
Published : Dec 12, 2025, 03:00 AM IST
11ಶಿರೂರು | Kannada Prabha

ಸಾರಾಂಶ

ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಅಂಗವಾಗಿ ಧಾನ್ಯ ಮುಹೂರ್ತ 14ರಂದು ಪೂರ್ವಾಹ್ನ 7.45ರ ಧನುರ್ಲಗ್ನ ಮುಹೂರ್ತದಲ್ಲಿ ನಡೆಯಲಿದೆ

ಉಡುಪಿ: ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಅಂಗವಾಗಿ ಧಾನ್ಯ ಮುಹೂರ್ತ 14ರಂದು ಪೂರ್ವಾಹ್ನ 7.45ರ ಧನುರ್ಲಗ್ನ ಮುಹೂರ್ತದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನ ಡಾ.ಉದಯ ಸರಳತ್ತಾಯ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನ್ನಬ್ರಹ್ಮ ಕೃಷ್ಣನ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದೂ ಕೃಷ್ಣನ ಪೂಜೆಯೇ ಆಗಿದೆ. ಈ ಅನ್ನದಾನಕ್ಕೆ ಹಿನ್ನೆಲೆಯಾಗಿ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಕಟ್ಟಿಗೆ ಮುಹೂರ್ತ, ಅಕ್ಕಿ ಮುಹೂರ್ತಗಳನ್ನು ಈಗಾಗಲೇ ಪೂರೈಸಲಾಗಿದ್ದು, ತರುವಾಯ ಧಾನ್ಯ (ಭತ್ತ) ಮುಹೂರ್ತ ನಡೆಸುವುದು ಸಂಪ್ರದಾಯ. ಕೃಷ್ಣನ ಪೂಜೆಗೆ, ನೈವೇದ್ಯಕ್ಕೆ, ಅನ್ನದಾನಕ್ಕೆ ಬೇಕಾದ ಅರಳು ಮತ್ತು ಅಕ್ಕಿಗಾಗಿ ಭತ್ತ ಸಂಗ್ರಹಣೆ ಈ ಕಾರ್ಯಕ್ರಮದ ಹಿಂದಿನ ಆಶಯ ಎಂದರು.

ಜೊತೆಗೆ ಸಂಗ್ರಹಿಸಿದ ಭತ್ತವನ್ನು ಕೃಷ್ಣಮಠದ ಬಡಗುಮಾಳಿಗೆಯಲ್ಲಿ ದಾಸ್ತಾನು ಮಾಡುವುದರಿಂದ, ಇನ್ನೊಂದರ್ಥದಲ್ಲಿ ಭಾವಿ ಪರ್ಯಾಯ ಮಠದವರು ಕೃಷ್ಣಮಠ ಪ್ರವೇಶಿಸುವ ಸಂದರ್ಭವೂ ಆಗಿದೆ. ಜೊತೆಗೆ ಭಕ್ತರು ತಾವು ಬೆಳೆದ ಫಸಲಿನ ಒಂದಂಶವನ್ನು ಭಗವಂತನಿಗೆ ಸಮರ್ಪಿಸಿ, ಕೃತಾರ್ಥರಾಗಲು ಇದೊಂದು ಸದವಕಾಶ ಎಂದು ಡಾ.ಸರಳತ್ತಾಯ ವಿವರಿಸಿದರು.14ರಂದು ಬೆಳಗ್ಗೆ 6.45 ಗಂಟೆಗೆ ಶೀರೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಚಂದ್ರೇಶ್ವರ - ಅನಂತೇಶ್ವರ ಹಾಗೂ ಕೃಷ್ಣ-ಮುಖ್ಯಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಮತ್ತೆ ಶಿರೂರು ಮಠಕ್ಕೆ ಆಗಮಿಸಿ, ಚಿನ್ನದ ಪಲ್ಲಕಿಯಲ್ಲಿ ಭತ್ತದ ಮುಡಿ ಸಹಿತ ಭಕ್ತರು ಸುಮಾರು 300 ಭತ್ತದ ಮುಡಿಗಳನ್ನು ತಲೆ ಮೇಲೆ ಹೊತ್ತುಕೊಂಡು ರಥಬೀದಿಗೆ ಪ್ರದಕ್ಷಿಣೆಗೈದು ಬಳಿಕ ಸುಮುಹೂರ್ತದಲ್ಲಿ ಕೃಷ್ಣಮಠದ ಬಡಗುಮಾಳಿಗೆಯಲ್ಲಿ ಇರಿಸಲಾಗುವುದು. ಬಳಿಕ ಕಟ್ಟಿಗೆ ರಥದ ಶಿಖರ ಕಲಶ ಪ್ರತಿಷ್ಠೆಯೂ ನಡೆಯಲಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಯದರ್ಶಿ ಮೋಹನ ಭಟ್, ಹೊರೆಕಾಣಿಕೆ ಸಂಚಾಲಕ ಬೈಕಾಡಿ ಸುಪ್ರಸಾದ ಶೆಟ್ಟಿ, ಪ್ರಮುಖರಾದ ಮಧುಕರ ಮುದ್ರಾಡಿ, ನಂದನ ಜೈನ್ ಹಾಗೂ ವಾಸುದೇವ ಆಚಾರ್ಯ ಇದ್ದರು. ಜ.9ರಂದು ಪುರಪ್ರವೇಶ

ಜ.18ರಂದು ಪ್ರಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನಲಂಕರಿಸಲಿರುವ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಂಪ್ರದಾಯದಂತೆ ಪ್ರಸ್ತುತ ದೇಶದ ಪುಣ್ಯ ತೀರ್ಥಕ್ಷೇತ್ರ ಸಂದರ್ಶನ ನಡೆಸುತ್ತಿದ್ದಾರೆ. ಜ.9ರಂದು ಅವರು ಮರಳಿ ಉಡುಪಿ ಪುರಪ್ರವೇಶ ಮಾಡುವರು. ಅಂದು ಅಪರಾಹ್ನ 3.30 ಗಂಟೆಗೆ ಕಡಿಯಾಳಿಯಿಂದ ಕೃಷ್ಣ ಮಠದವರೆಗೆ ವೈಭವದ ಮೆರವಣಿಗೆ ಮೂಲಕ ಅವರನ್ನು ಸ್ವಾಗತಿಸಲಾಗುವದು ಎಂದು ಪರ್ಯಾಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ