ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ

KannadaprabhaNewsNetwork |  
Published : Dec 12, 2025, 02:45 AM IST
ಗದಗ ಜಿಲ್ಲಾಡಳಿತ ನರೇಗಲ್ಲ ಪಪಂ ಗೆ ಬರೆದ ಪತ್ರದ ಪ್ರತಿ. | Kannada Prabha

ಸಾರಾಂಶ

. ಕೆರೆ ಸಂರಕ್ಷಣೆ ಮತ್ತು ಅಕ್ರಮ ತೆರವುಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಜಿಲ್ಲೆಯ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹಿರೇಕೆರೆಯ ಒತ್ತುವರಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯವು ಗದಗ ಜಿಲ್ಲಾಡಳಿತ(ಜಿಲ್ಲಾ ನಗರಾಭಿವೃದ್ಧಿ ಕೋಶ)ಕ್ಕೆ ತುರ್ತು ಕ್ರಮಕ್ಕೆ ನಿರ್ದೇಶನ ನೀಡಿದರೂ ಅಧಿಕಾರಿಗಳು ಮಾತ್ರ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಕಾರ್ಯಾಲಯದಿಂದ ಬಂದಿರುವ ತುರ್ತು ಆದೇಶವನ್ನು ಉಲ್ಲೇಖಿಸಿ ಜಿಲ್ಲಾ ಯೋಜನಾ ನಿರ್ದೇಶಕರು ನರೇಗಲ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಡಿ. 1ರಂದು ಪತ್ರ ಬರೆದಿದ್ದು, ಅದರಲ್ಲಿ ​ಕೆರೆಯ ಬಹಳಷ್ಟು ಪ್ರದೇಶ ಒತ್ತುವರಿದಾರರ ಪಾಲಾಗಿದೆ ಎಂದು ಚ.ಅಂ. ಹಿರೇಮಠ ಎಂಬವರು ನೇರವಾಗಿ ಮುಖ್ಯಮಂತ್ರಿಗಳ ಕಚೇರಿಗೆ ಪತ್ರ ಬರೆದು ತಿಳಿಸಿದ್ದಾರೆ. ಮೂಲ ದಾಖಲೆ ಪತ್ರಗಳ ಸಮೇತ ನರೇಗಲ್ಲಿನ ಹಿರೇಕೆರೆಯ ಒಟ್ಟು ವಿಸ್ತೀರ್ಣ 69 ಎಕರೆ 22 ಗುಂಟೆ ಇದೆ. ಅಕ್ರಮ ಒತ್ತುವರಿ ಕಾರಣದಿಂದ ಪ್ರಸ್ತುತ ಕೇವಲ 29 ಎಕರೆ 32 ಗುಂಟೆ ಮಾತ್ರ ಉಳಿದಿದೆ. ಅಂದರೆ ಕೆರೆಯ ವಿಸ್ತೀರ್ಣದ ಅರ್ಧಕ್ಕಿಂತ ಹೆಚ್ಚು ಭಾಗವು(40 ಎಕರೆಗೂ ಹೆಚ್ಚು) ಕಬಳಿಕೆಯಾಗಿದೆ ಎಂಬ ಗಂಭೀರ ಆರೋಪ ಪತ್ರದಲ್ಲಿದೆ. ಈ ಪತ್ರವನ್ನು ಪುರಸ್ಕರಿಸಿರುವ ಸರ್ಕಾರ ಕ್ರಮಕ್ಕೆ ಸೂಚಿಸಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ.ಪತ್ರ ಬರೆದು ಕೈತೊಳೆದುಕೊಂಡ ಜಿಲ್ಲಾಡಳಿತ: ಮುಖ್ಯಮಂತ್ರಿಗಳ ಸಚಿವಾಲಯದ ನಿರ್ದೇಶನ(ಸಂಖ್ಯೆ: ಐಪಿಜಿಆರ್‌ಎಸ್‌/277181 ದಿ: 17-10-2025) ಆಧರಿಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ನರೇಗಲ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಅರ್ಜಿದಾರರು ಸಲ್ಲಿಸಿರುವ ಕೆರೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಒತ್ತುವರಿಯ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕೆರೆ ಒತ್ತುವರಿಯಾಗಿರುವುದು ದೃಢಪಟ್ಟರೆ, ಕೂಡಲೇ ನಿಯಮಾನುಸಾರ ತೆರವುಗೊಳಿಸಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಹಾಗೂ ​ಅರ್ಜಿದಾರರಿಗೆ ಕೈಗೊಂಡ ಕ್ರಮದ ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿ ಕೈತೊಳೆದುಕೊಂಡಿದೆ.

​ಈ ಆದೇಶದಿಂದಾಗಿ ನರೇಗಲ್ಲ ಹಿರೇಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ದೊರೆತಂತಾಗಿದೆ. ಕೆರೆ ಸಂರಕ್ಷಣೆ ಮತ್ತು ಅಕ್ರಮ ತೆರವುಗೊಳಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಜಿಲ್ಲೆಯ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಕಾನೂನು ಹೋರಾಟ: ಎಚ್ಚರಿಕೆ

ಕೆರೆ ಒತ್ತುವರಿಯಾಗಿದೆ ಎಂದು ಎಲ್ಲ ಅಗತ್ಯ ದಾಖಲೆಗಳ ಸಮೇತ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಭೇಟಿ ನೀಡಿ ವಿಷಯ ತಿಳಿಸಿದ್ದೇನೆ. ಆದರೆ ಜಿಲ್ಲಾಧಿಕಾರಿಗಳು ನೀನು ಹೇಳಿದ್ದೆಲ್ಲ ಮಾಡಾಕ ಅಗಲ್ಲಪಾ, ಅದೇನು ದೂರು ಕೊಟ್‌ಗೊಂತಿಯೋ ಕೊಟ್ಕೋ ಹೋಗು ಎಂದು ಹೇಳಿದ ನಂತರವೇ ನಾನು ಸಿಎಂ ಕಚೇರಿಗೆ ದಾಖಲೆಗಳ‌ ಸಮೇತ ಮನವಿ ಮಾಡಿದ್ದೇನೆ. ಈಗ ಅಲ್ಲಿಂದ ಪತ್ರ ಬಂದರೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನಹರಿಸದೇ ಕೇವಲ ಕಾಟಾಚಾರಕ್ಕೆ ಎನ್ನುವಂತೆ ನರೇಗಲ್ಲ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ‌. ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಆಸ್ತಿ ಒತ್ತುವರಿ ತೆರವುಗೊಳಿಸುವಂತೆ ಕೆರೆ ಸಂರಕ್ಷಣಾ ಪ್ರಾಧಿಕಾರದಿಂದಲೂ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಹಿರಿಯ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಕಾನೂನು ಹೋರಾಟವನ್ನು ನಡೆಸಲಾಗುವುದು ಎಂದು ದೂರುದಾರ, ಸಾಮಾಜಿಕ ಹೋರಾಟಗಾರ ಚ.ಅಂ. ಹಿರೇಮಠ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ