ಶಿರೂರು- ಹೆಜಮಾಡಿ ಜೋಡಿಸಿದ ಕೈ ಸರಪಳಿ

KannadaprabhaNewsNetwork | Published : Sep 16, 2024 1:52 AM

ಸಾರಾಂಶ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಿರೀಕ್ಷೆಯ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾನುವಾರ ಮುಂಜಾನೆ ಉಡುಪಿ ಜಿಲ್ಲೆಯ ಉತ್ತರದ ಗಡಿ ಭಾಗ ಶಿರೂರುನಿಂದ ದಕ್ಷಿಣದ ಗಡಿಭಾಗ ಹೆಜಮಾಡಿವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಸ್ವಯಂಸ್ಫೂರ್ತಿಯಿಂದ ಕೈಕೈ ಹಿಡಿದು ಪ್ರಜಾಪ್ರಭುತ್ವದ ಮೇಲೆ ತಮ್ಮ ದೃಢ ವಿಶ್ವಾಸ ಸಾರಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ರಾಜ್ಯದಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೆ 2,500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ಭಾನುವಾರ ರಚಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿಯೂ ಶಿರೂರಿನಿಂದ ಹೆಜಮಾಡಿವರೆಗೆ ಸುಮಾರು 107 ಕಿ.ಮೀ. ಉದ್ದದ ಮಾನವ ಸರಪಳಿ ರಚಿಸಲಾಯಿತು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯಾವುದೇ ಬೇಧ ಇಲ್ಲದೆ ಇದರಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಉಡುಪಿ ನಗರದ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಚಂಡೆ ಬಾರಿಸುವ ಮೂಲಕ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾನವ ಸರಪಳಿಗೆ ಚಾಲನೆ ನೀಡಿದರು, ನಂತರ ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ಎಲ್ಲೆಡೆ ಪಸರಿಸುವ ಉದ್ದೇಶದಿಂದ ರಚಿಸಲಾಗಿರುವ ಈ ಸರಪಳಿಯು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿ ಪ್ರತಿಯೊಬ್ಬರ ಬದುಕಿನ ಭದ್ರ ಬುನಾದಿಯಾಗಲಿ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಮಾತನಾಡಿ, ಸಂವಿಧಾನವು ನೀಡಿರುವ ನಮ್ಮ ಜವಾಬ್ದಾರಿಗಳ ಅರ್ಥೈಸಿಕೊಂಡಾಗ ಮಾತ್ರ ನಮ್ಮ ಹಕ್ಕುಗಳಿಗೆ ಅರ್ಥ ಬರುತ್ತದೆ. ಪ್ರತಿ ಪ್ರಜೆಯನ್ನು ನಮ್ಮ ಸಂವಿಧಾನ ಪ್ರಭು ಎಂದು ಒಪ್ಪಿಕೊಂಡಿದೆ. ಸಂವಿಧಾನವನ್ನು ನಿರ್ವಹಿಸುವ ಜನರು ಎಷ್ಟು ಉತ್ತಮವಾಗಿರುತ್ತಾರೋ ಸಂವಿಧಾನವು ಅಷ್ಟೇ ಉತ್ತಮವಾಗಿ ಜಾರಿಗೆ ಬರುತ್ತದೆ ಎಂದರು. 500 ಮೀಟರ್‌ ಉದ್ದದ ರಾಷ್ಟ್ರಧ್ವಜ ಪ್ರದರ್ಶನ: 107 ಕಿ.ಮೀ. ಸರಪಳಿಯುದ್ದಕ್ಕೂ ಜನರ ಸಂಭ್ರಮವನ್ನು ಹೆಚ್ಚಿಸಲು ಚಂಡೆ ವಾದನ, ಕಂಗೀಲು ನೃತ್ಯ, ಯಕ್ಷಗಾನ ಹಾಗೂ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಉಡುಪಿಯಲ್ಲಿ 500 ಮೀ. ಉದ್ದದ ರಾಷ್ಟ್ರ ಧ್ವಜ ಪ್ರದರ್ಶಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಮಾನವ ಸರಪಳಿಯಲ್ಲಿ ಬಾಗವಹಿಸಿದ್ದವರು ತಮ್ಮ ಎರಡು ಕೈಗಳನ್ನು ಮೇಲೆತ್ತಿ ಜೈ ಹಿಂದ್, ಜೈ ಕರ್ನಾಟಕ ಘೋಷಣೆ ಕೂಗುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಜಿಲ್ಲಾಡಳಿತ ಹೊರತಂದ ‘ಪ್ರಜಾಪ್ರಭುತ್ವ ಆಶಯ’ ಎಂಬ ಕಿರುಹೊತ್ತಗೆ ಬಿಡುಗಡೆಗೊಳಿಸಲಾಯಿತು. ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.

ಜಿಪಂ ಸಿಇಒ ಪ್ರತೀಕ್ ಬಾಯಲ್, ಎಸ್ಪಿ ಡಾ. ಅರುಣ್ ಕೆ., ಡಿ.ಎಫ್.ಒ. ಗಣಪತಿ, ಎಡಿಸಿ ಮಮತಾದೇವಿ ಜಿ.ಎಸ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ರೋಟರಿಯ ಗರ್ವನರ್ ದೇವಾನಂದ್, ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಸ್ವಾತಂತ್ರ್ಯ ಹೋರಾಟಗಾರ ಮಲ್ಪೆ ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.ಕೈ ಹಿಡಿದವರು 1,01,500 ಮಂದಿಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ನಿರೀಕ್ಷೆಯ 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.ಬೈಂದೂರಿನಲ್ಲಿ 21,000, ಕುಂದಾಪುರದಲ್ಲಿ 19000, ಬ್ರಹ್ಮಾವರ 26,000, ಉಡುಪಿ 10,500, ಕಾಪು 25,000 ಜನರು ಸೇರಿ ಒಟ್ಟು 1,01,500 ಮಂದಿ ಭಾಗವಹಿಸಿದ್ದರು ಎಂದು ಜಿಲ್ಲಾಡಳಿತ ತಿಳಿಸಿದೆ.ಪ್ರಜಾಪ್ರಭುತ್ವ ದಿನಾಚರಣೆಗೆ ಬಂದ ಗಾಂಧಿ, ನೇತಾಜಿ, ಝಾನ್ಸಿ ರಾಣಿ...

ಕನ್ನಡಪ್ರಭ ವಾರ್ತೆ ಸಾಸ್ತಾನಇಲ್ಲಿನ ಸಾಸ್ತಾನದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಡಿ ಗ್ರಾಮ ಪಂಚಾಯತ್ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಹಾತ್ಮಾಗಾಂಧೀಜಿ ಸೇರಿದಂತೆ ಹತ್ತಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಕೈಕೈಹಿಡಿದು ಭಾರತಮಾತೆಗೆ ಜೈಕಾರ ಹಾಕಿ ಸಂಭ್ರಮಿಸಿದರು.

ಕೋಡಿ ಹೊಸಬೆಂಗ್ರೆ ಅಂಗನವಾಡಿ ಪುಟಾಣಿಗಳು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಷ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ವೀರ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ದುರ್ಗದ ವನಕೆ ಓಬವ್ವ ಮುಂತಾದವರ ವೇಷ ಭೂಷಣ ಧರಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಮಾನವ ಸರಪಳಿಯನ್ನು ಅರ್ಥ ಪೂರ್ಣಗೊಳಿಸಿದರು. ‍ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ ಅವರ ನೇತೃತ್ವದಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂಗವಾಡಿ ಕಾರ್ಯಕರ್ತೆ - ಸಹಾಯಕಿಯರು ಮತ್ತು ಪುಟಾಣಿಗಳ ಪೋಷಕರು ಸಕ್ರಿಯವಾಗಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಕೃಷ್ಣ ಪೂಜಾರಿ, ಪ್ರಭಾಕರ ಮೆಂಡನ್,ಸರಸ್ಪತಿ , ಸಿಬ್ಬಂದಿಯವರು ಸ್ತ್ರಿಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕೋಟ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು - ಸಿಬ್ಬಂದಿ, ಕೋಟ ಆರಕ್ಷಕ ಠಾಣೆಯ ಪೊಲೀಸರು ಮಾನವ ಸರಪಳಿಯಲ್ಲಿ ಕೈಜೋಡಿಸಿದರು.

Share this article