ಅಂಕೋಲಾದ ಶಿರೂರಿನ ಗುಡ್ಡ ಕುಸಿತ : ಲಾರಿ ಚಾಲಕನ ಪತ್ತೆಗೆ ಈಶ್ವರ್ ಮಲ್ಪೆ ತಂಡಕ್ಕೆ ಬುಲಾವ್

KannadaprabhaNewsNetwork | Updated : Jul 27 2024, 12:19 PM IST

ಸಾರಾಂಶ

ಈಶ್ವರ್ ಮಲ್ಪೆ ಶುಕ್ರವಾರ ಮಧ್ಯರಾತ್ರಿ ಮಲ್ಪೆಯಿಂದ ಹೊರಟು ಶನಿವಾರ ಮುಂಜಾನೆ 7.30ಕ್ಕೆ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಲಿದ್ದಾರೆ.

 ಉಡುಪಿ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು ಲಾರಿ ಸಹಿತ ಚಾಲಕ ಮುಳುಗಿದ್ದು, ಚಾಲಕನ ಮೃತದೇಹವನ್ನು ಹುಡುಕುವುದಕ್ಕೆ ಪೊಲೀಸ್ ಇಲಾಖೆ ಇದೀಗ ಉಡುಪಿಯ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡಕ್ಕೆ ಬುಲಾವ್ ಕಳುಹಿಸಿದೆ.

ಈಶ್ವರ್ ಮಲ್ಪೆ ಶುಕ್ರವಾರ ಮಧ್ಯರಾತ್ರಿ ಮಲ್ಪೆಯಿಂದ ಹೊರಟು ಮುಂಜಾನೆ 7.30ಕ್ಕೆ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಘಟನೆ ನಡೆದು ಹತ್ತು ದಿನಗಳು ಕಳೆದು ಹೋಗಿದೆ. ಕುಸಿದ ಗುಡ್ಡದಡಿ ಸಿಲುಕಿ ನೀರಿನಲ್ಲಿ ಮುಳುಗಿದ 11 ಮಂದಿಯಲ್ಲಿ ಇದುವರೆಗೆ 8 ಜನರ ಮೃತದೇಹ ಪತ್ತೆಯಾಗಿದ್ದು, ಲಾರಿ ಜೊತೆಗೆ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಇನ್ನೂ ನಾಪತ್ತೆಯಾಗಿದ್ದಾರೆ.

ಸ್ಥಳೀಯ ಪೋಲೀಸ್ ಇಲಾಖೆ - ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್. ಪಡೆಗಳ ನಂತರ ಸೇನೆಯನ್ನೂ ಕರೆಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದೀಗ ಉನ್ನತ ತಂತ್ರಜ್ಞಾನವನ್ನು ಬಳಸಿದರೂ ಲಾರಿ ಮತ್ತು ಚಾಲಕನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಇದೀಗ ಲಾರಿ ಇರುವಿಕೆಯನ್ನು ಖಾತ್ರಿ ಪಡಿಸಲು ಮತ್ತು ಲಾರಿ ಒಳಗಡೆ ಇರುವ ಚಾಲಕ ಅರ್ಜುನ್‌ನನ್ನು ಹೊರತೆಗೆಯಲು ಆಪತ್ಭಾಂಧವ ಈಶ್ವರ್ ಮಲ್ಪೆಯವರಿಗೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಂದ ಕರೆ ಬಂದಿದೆ.

ಈ ಸಂದರ್ಭದಲ್ಲಿ ಈಶ್ವರ್ ಮತ್ತವರ ತಂಡ ಮಡಿಕೇರಿಯ ಕುಶಾಲನಗರದ ಕಾವೇರಿ ನದಿಯಲ್ಲಿ 5 ದಿನಗಳ ಹಿಂದೆ ಕೊಚ್ಚಿಹೋದ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದರು. ಸಂಜೆ ಆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಿ, ಊರಿಗೆ ಹೊರಟಿದ್ದಾರೆ. ಮಧ್ಯರಾತ್ರಿ ಮನೆಗೆ ತಲುಪಿ ಮತ್ತೆ ಶಿರೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಇದುವರೆಗೆ ನದಿ, ಕೆರೆ, ಸಮುದ್ರದಲ್ಲಿ ಮುಳುಗಿದ್ದ ನೂರಾರು ಶವಗಳನ್ನು ಹುಡುಕಿ ಮೇಲೆತ್ತಿ ತಂದಿರುವ ಸಾಹಸಿ ಈಶ್ವರ್ ಮಲ್ಪೆ, ಶಿರೂರಿನಲ್ಲಿ ಇನ್ನೂ ಹರಿಯುತ್ತಿರುವ ಪ್ರವಾಹದಲ್ಲಿ ಕಾರ್ಯಾಚರಣೆ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿಯಾಗಿರಲಿದೆ. ಆದರೂ ಹೆತ್ತ ಕರುಳಿನ ಕೂಗು ಮತ್ತು ಹೆಂಡತಿ ಮಕ್ಕಳು ಕುಟುಂಬದ ಕಣ್ಣೀರೊರೆಸಲು ಹೊರಡುತ್ತಿದ್ದೇವೆ. ಕಾರ್ಯಾಚರಣೆಯ ಯಶಸ್ಸಿಗೆ ದೈವದೇವರಲ್ಲಿ ಪ್ರಾರ್ಥಿಸಿ ಎಂದಿದ್ದಾರೆ.

Share this article