ಅಂಕೋಲಾ: ಶಿರೂರು ಭೂ ಕುಸಿತ ದುರಂತದ ಮೂರನೇ ಹಂತದ ಶೋಧ ಕಾರ್ಯ 13 ದಿನ ಪೂರೈಸಿದ ಹಿನ್ನೆಲೆ ಡ್ರಜ್ಜಿಂಗ್ ಬೋಟ್ ಮೂಲಕ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ. ಗುರುವಾರದಿಂದ ಮುಳುಗು ತಜ್ಞರು, ಪೋಕ್‌ಲೈನ್ ಮೂಲಕ ಕಾರ್ಯಾಚರಣೆ ಮುಂದುವರಿದಿದೆ.ಕಳೆದ 13 ದಿನದಿಂದ ಗಂಗಾವಳಿ ನದಿಯಲ್ಲಿ ಗೋವಾದ ಓಶಿಯನ್ ಕಂಪನಿ ನಿರಂತರ ಕಾರ್ಯಾಚರಣೆ ನಡೆಸಿತ್ತು. ₹1 ಕೋಟಿ ವೆಚ್ಚದ 13 ದಿನದ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಈ 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿತ್ತು.ಇದಾದ ನಂತರ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಿದ್ದು, ಗುರುವಾರದಿಂದ ಇಬ್ಬರು ಮುಳುಗುತಜ್ಞರು, ಪೋಕ್‌ಲೈನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಲಕ್ಷ್ಮಣ ನಾಯ್ಕ ಅಂಗಡಿ ಬಳಿ ಜೆಸಿಬಿಯಿಂದ ಮಣ್ಣು ತೆಗೆಯುತ್ತಿದ್ದಾಗ ಲಕ್ಷ್ಮಣ ನಾಯ್ಕ ಕುಟುಂಬದ ಬಟ್ಟೆಗಳು, ಪಾತ್ರೆಗಳು ಪತ್ತೆಯಾಗಿದೆ.
ಇಲ್ಲಿಯವರೆಗೆ ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸಧ್ಯ ಸಿಕ್ಕ ಮೂಳೆಗಳ ಡಿಎನ್ಎ ಪರೀಕ್ಷೆಯ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.ಪ್ರಯೋಗಾಲಯಕ್ಕೆ ರವಾನೆ: ಗಂಗಾವಳಿ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಡ್ರಜ್ಜಿಂಗ್ ಕಾರ್ಯಕ್ಕೆ ತೊಡಕಾಗಿದೆ ಎಂದು ತಂತ್ರಜ್ಞರು ತಿಳಿಸಿದ್ದರಿಂದ ಡ್ರಜಿಂಗ್ ಕಾರ್ಯವನ್ನು ಸ್ಥಗಿತಗೊಂಡಿದೆ. ದುರಂತ ನಡೆದ ಲಕ್ಷ್ಮಣ ನಾಯ್ಕ ಅಂಗಡಿ ಇದ್ದ ಸ್ಥಳದಲ್ಲಿ ಜೆಸಿಬಿ ಬಳಸಿ ಮಣ್ಣನ್ನು ತೆಗೆಯಲಾಗುತ್ತಿದೆ. ಕಾರ್ಯಾಚರಣೆಯ ವೇಳೆ ದೊರೆತ ಮನುಷ್ಯನ ಪಕ್ಕೆಲುಬು ಮತ್ತು ಕೈ ಮೂಳೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಬೇಗ ವರದಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.
ಹೊಳೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವುಭಟ್ಕಳ: ಕೃಷಿ ಕೆಲಸಕ್ಕೆ ತೋಟಕ್ಕೆ ಹೋಗಿದ್ದ ವ್ಯಕ್ತಿಯೋರ್ವ ಹೊಳೆಯಲ್ಲಿ ಕೈಕಾಲು ತೊಳೆಯುವ ಸಂದರ್ಭದಲ್ಲಿ ಜಾರಿ ಬಿದ್ದು ನೀರುಪಾಲಾಗಿದ್ದು, ಮೃತದೇಹ ಗುರುವಾರ ಪತ್ತೆಯಾಗಿದೆ.ಮೃತನನ್ನು ಮಾರುಕೇರಿಯ ಕಿತ್ರೆಯ ನಿವಾಸಿ ರಾಮಯ್ಯ ಕೃಷ್ಣ ಗೊಂಡ(52) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಕೃಷಿ ಕೆಲಸಕ್ಕೆ ತೋಟಕ್ಕೆ ಹೋದವರು ಸನಿಹದ ಹೊಳೆಯಲ್ಲಿ ಕೈಕಾಲು ತೊಳೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರುಪಾಲಾಗಿದ್ದರು. ಇವರ ಪತ್ತೆಗಾಗಿ ಸಾಕಷ್ಟು ಶೋಧ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ ಗುರುವಾರ ಅದೇ ಹೊಳೆಯಲ್ಲೇ ಶವ ಪತ್ತೆಯಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.