ರಾಘು ಕಾಕರಮಠ
ಇದು ಶಿರೂರಿನ ಮಣ್ಣು ಕುಸಿತ ಪ್ರದೇಶದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರ ಕುಟುಂಬದ ಕಥೆ. ಮೂವರು ಹೆಣ್ಣುಮಕ್ಕಳನ್ನು ಸಾಕಿ ಸಲುಹಿದ ಜಗನ್ನಾಥ ನಾಯ್ಕ ಕಣ್ಮರೆಯಾಗಿ 8 ದಿನ ಕಳೆಯುತ್ತ ಬಂದಿದೆ. ಆದರೆ ಇರುವಿಕೆ ಮಾತ್ರ ನಿಗೂಢವಾಗಿದ್ದು, ಆತನ ಕುಟುಂಬದವರು ಕಣ್ಣೀರಲ್ಲೆ ಕೈ ತೊಳೆಯುತ್ತಿದ್ದಾರೆ.
ನೂತನ ಮನೆ ಕಟ್ಟಬೇಕೆಂಬ ಕನಸು: ಜಗನ್ನಾಥ ನಾಯ್ಕ ಮೂಲತಃ ಕುಮಟಾದ ಬಾಡದ ಹುಬ್ಬಣಗೇರಿಯವರು. 30 ವರ್ಷದ ಹಿಂದೆ ಶಿರೂರಿನ ಬೇಬಿ ನಾಯ್ಕ ಅವರನ್ನು ಮದುವೆಯಾದ ಮೇಲೆ ಶಿರೂರಿನಲ್ಲಿಯೆ ವಾಸವಾಗಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಬಿರುಕು ಬಿಟ್ಟ ಗೋಡೆ ಕಂಡು ಹೇಗಾದರೂ ಮಾಡಿ ಮನೆ ಕಟ್ಟಬೇಕು. ಮೂವರು ಹೆಣ್ಣುಮಕ್ಕಳಿಗೆ ಒಂದೊಂದು ರೂಂ ನಿರ್ಮಿಸಬೇಕು. ನಾವು ಗಂಡ- ಹೆಂಡತಿ ಮನೆಯ ವರಾಂಡದಲ್ಲಿ ಉಳಿದುಕೊಂಡರಾಯಿತು ಎಂಬುದು ಜಗನ್ನಾಥ ಅವರ ಆಸೆಯಾಗಿತ್ತು.ಮಕ್ಕಳೆಂದರೆ ಪ್ರಾಣ: ಜಗನ್ನಾಥ ದಂಪತಿಗಳ ಮೂವರು ಹೆಣ್ಣುಮಕ್ಕಳಾದ ಮನಿಷಾ, ಕೃತಿಕಾ, ಪಲ್ಲವಿ ಅವರ ಕಣ್ಣುಗಳಾಗಿದ್ದವು. ಮನೀಷಾಳ ಮದುವೆಯನ್ನು ಮಾಡಿಕೊಡಲಾಗಿತ್ತು. ಇನ್ನು ಕೃತಿಕಾ ಹಾಗೂ ಪಲ್ಲವಿ ಮದುವೆಯನ್ನು ಒಂದೇ ದಿನ ನಿಗದಿಪಡಿಸಿ, ಆ ಸಂಭ್ರಮವನ್ನು ಕಣ್ಣು ತುಂಬಿಸಿಕೊಳ್ಳಬೇಕು ಎಂದು ಆಗಾಗ ಹೇಳಿಕೊಳ್ಳುತ್ತಿದ್ದರಂತೆ. ಘಟನೆ ನಡೆದ ಹಿಂದಿನ ದಿನದ ರಾತ್ರಿಯೂ ಊಟ ಮುಗಿದ ಈ ವಿಷಯವನ್ನು ಪ್ರಸ್ತಾಪಿಸಿ ಆದಷ್ಟು ಬೇಗ ಈ ಕನಸು ನನಸಾಗಲಿ ಎಂದು ಪತ್ನಿ ಬೇಬಿಯೊಂದಿಗೆ ಹೇಳಿಕೊಂಡಿದ್ದರಂತೆ.
ಇತ್ತ ತಮ್ಮ ಇಲ್ಲ, ಅತ ಪತಿಯೂ ಇಲ್ಲ: ಶಿರೂರಿನ ಗುಡ್ಡ ಕುಸಿತ ಘಟನೆಯಲ್ಲಿ ಚಹಾ ಅಂಗಡಿಯ ಮಾಲೀಕ ಲಕ್ಷ್ಮಣ ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿದ್ದ. ಇತ್ತ ಪತಿ ಜಗನ್ನಾಥ ಮಣ್ಣಿನಲ್ಲಿ ಹೂತು ಹೋಗಿ ನಾಪತ್ತೆಯಾಗಿದ್ದ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪತಿ, ಎಲ್ಲ ಕೆಲಸದಲ್ಲೂ ಹೆಗಲಾಗುತ್ತಿದ್ದ ತಮ್ಮನ ಪ್ರೋತ್ಸಾಹ, ಮುತ್ತಿನಂಥ ಅತ್ತಿಗೆ ಶಾಂತಿ, ಚಿಲಿಪಿಲಿಯಂತೆ ಓಡಾಡುತ್ತಿದ್ದ ಮಕ್ಕಳಾದ ರೋಷನ್, ಆವಂತಿಕಾ ಎಲ್ಲವನ್ನು ನಾನು ಕಳೆದುಕೊಂಡೆ ಎಂಬ ಬೇಬಿ ನಾಯ್ಕ ಅವರ ರಕ್ತ ಕಣ್ಣೀರಿಗೆ ಎಂಥವರ ಕಲ್ಲು ಹೃದಯವು ಕರಗಿಸುತ್ತದೆ.
ಶಿರೂರಿನ ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ ನಾಯ್ಕ ಪತ್ತೆ ಇನ್ನುವರೆಗೂ ಆಗಿಲ್ಲ. ಇವರ ಮನೆಯಲ್ಲಿ ಕಣ್ಣೀರು ಬಿಟ್ಟರೆ, ಊಟವನ್ನು ಬಿಟ್ಟು ನೀರೆ ಕುಡಿದು ಜಗನ್ನಾಥ ನಾಯ್ಕ ಬರುವಿಕೆಗಾಗಿ ಕಾದು ಕುಳಿತಿರುವ ಈ ಕುಟುಂಬದ ಕಣ್ಣುಗಳು ಮಂಜಾಗುತ್ತಿದೆ. ಆದಷ್ಟು ಬೇಗ ಜಗನ್ನಾಥ ಅವರ ಪತ್ತೆಯನ್ನು ಜಿಲ್ಲಾಡಳಿತ ಕೈಗೊಂಡು ದುಗುಡ ದೂರ ಮಾಡಿಕೊಡಬೇಕು ಎಂಬ ಕೂಗು ಕೇಳಿ ಬಂದಿದೆ.
ಮದುವೆಯಾದ ಮೇಲೆ ಎಂದೂ ಮದುವೆಯ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಜಗನ್ನಾಥ ನಾಯ್ಕ ಅವರು ಮಾಡಿಕೊಂಡಿರಲಿಲ್ಲ. ಕಳೆದ ಮೇ 17ರಂದು ಮಕ್ಕಳ ಒತ್ತಾಯಕ್ಕೆ ಮಣಿದು ಕೇಕ್ ಕಟ್ ಮಾಡಿ ಸಂಭ್ರಮ ಪಟ್ಟು, ಮಕ್ಕಳ ಪ್ರೀತಿ ಕಂಡು ಜನ್ಮ ಸಾರ್ಥಕವಾಯಿತು ಎಂದಿದ್ದರಂತೆ ಜಗನ್ನಾಥ.