ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದಾಗಿ ಕಣ್ಮರೆಯಾದ ಮೂವರು ವ್ಯಕ್ತಿಗಳು, ವಾಹನಗಳನ್ನು ಹುಡುಕಲು ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ತೀವ್ರಗೊಳಿಸಲು ಕೇರಳದಿಂದ ಬಾರ್ಜ್ ಮೌಂಟೆಡ್ ಪೋಕ್ಲೈನ್ ಯಂತ್ರದ ಮೂಲಕ ಕಾರ್ಯಾಚರಣೆ ಕೈಗೊಳ್ಳುವ ಉದ್ದೇಶದಿಂದ ಕೇರಳದ ತಜ್ಞರ ತಂಡದ ಸದಸ್ಯರು ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ತಂಡದೊಂದಿಗೆ ಆಗಮಿಸಿದ ಶಾಸಕ ಸತೀಶ ಸೈಲ್ ಅವರೊಂದಿಗೆ ಕಾರ್ಯಾಚರಣೆ ಯಾವ ರೀತಿಯಲ್ಲಿ ಕೈಗೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್ ಮಾತನಾಡಿ, ನೀರಿನಲ್ಲಿ ಕಣ್ಮರೆಯಾದವರ ಪತ್ತೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ನದಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಉದ್ದೇಶದಿಂದ ಬಾರ್ಜ್ ಮೇಲೆ ಕಾರ್ಯ ನಿರ್ವಹಿಸುವ ಯಂತ್ರ ತರಲು ಸಿದ್ಧತೆ ನಡೆದಿದ್ದು, ಅದರ ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಲು ಕೇರಳದ ತಂಡ ಆಗಮಿಸಿದೆ ಎಂದರು. ಯಂತ್ರದ ಸಹಾಯದಿಂದ ನದಿಯ ಆಳದಲ್ಲಿ ಗಟ್ಟಿಯಾಗಿರುವ ಗುಡ್ಡದ ಮಣ್ಣನ್ನು ಕೆರೆದು, ಒಡೆದು ಪುಡಿ ಮಾಡಲಾಗುವುದು. 15 ಅಡಿಗಳಷ್ಟು ಆಳದಲ್ಲಿ ಮಣ್ಣು ಒಡೆಯುವ ಕೆಲಸ ಯಂತ್ರ ಮಾಡಲಿದೆ ಎಂದ ಅವರು, ಮಣ್ಣಿನ ದಿಬ್ಬ ಒಡೆಯುವ ಜತೆಗೆ 80 ಎಚ್‌ಪಿ ಸಾಮರ್ಥ್ಯದ ಪಂಪ್ ಬಳಸಿ ಕಲ್ಲು, ಕೆಸರು ಮಿಶ್ರಿತ ನೀರನ್ನು ನದಿಯ ನೀರಿನ ಹರಿವಿನ ಜತೆ ಬಿಡುವ ಕೆಲಸ ನಡೆಯಲಿದೆ ಎಂದರು.ಅಮಾವಾಸ್ಯೆ ಸಂದರ್ಭದಲ್ಲಿ ನದಿಯ ನೀರಿನ ಹರಿವು ಕಡಿಮೆ ಇರುವುದರಿಂದ ಮುಳುಗುತಜ್ಞ ಈಶ್ವರ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ನಡೆಸಲಿದೆ. ಬೆಳಗಾವಿಯಿಂದ ಬಂದ ಬೂಮ್ ಪೋಕ್ಲೈನ್ ಯಂತ್ರ ಸ್ಥಳದಲ್ಲೇ ಇದ್ದು, ಅದರ ಸಹಾಯ ಪಡೆಯುವ ಜತೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನೌಕಾಪಡೆಯ ಸಹಕಾರದಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದರು.
ಯಂತ್ರದ ವಿನ್ಯಾಸಕಾರ ತಾಂತ್ರಿಕ ಪರಿಣಿತ ನಿದಿನ್, ಮುಳುಗುತಜ್ಞ ಈಶ್ವರ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು. ಶೋಧ ಕಾರ್ಯ: ನಾನು ಇಲ್ಲಿಯ ಕಾರ್ಯಾಚರಣೆಗೆ ಸಂಪೂರ್ಣ ಸಹಕರಿಸುತ್ತೇನೆ. ರಾಜ್ಯ, ದೇಶದ ಮೂಲೆ ಮೂಲೆಗಳಲ್ಲಿ ಸಮಸ್ಯೆ ಇರುವಲ್ಲಿ ಸ್ಪಂದಿಸಿ ಕೆಲಸ ಮಾಡಿದ್ದೇವೆ. ಅಮಾವಾಸ್ಯೆಯ ಸಂದರ್ಭದಲ್ಲಿ ಇಲ್ಲಿ ನೀರು ಕಡಿಮೆಯಾಗಲಿದ್ದು, ಶೋಧ ಕಾರ್ಯ ನಡೆಸಲಾಗುವುದು ಎಂದು ಮುಳುಗುತಜ್ಞ ಈಶ್ವರ್ ಮಲ್ಪೆ ತಿಳಿಸಿದರು.