ಕ್ರಿಯಾ ಸಮಾಧಿಯೊಳಗೆ ಶಿವ ಸಂಗಮ

KannadaprabhaNewsNetwork |  
Published : May 30, 2025, 12:02 AM IST
29ಕೆಕೆಆರ್3:ಕುಕನೂರು ತಾಲೂಕಿನ ಬೆದವಟ್ಟಿಯಲ್ಲಿ ಲಿಂಗೈಕ್ಯರಾದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯರ ಕ್ರೀಯಾ ಸಮಾಧಿ ಜರುಗಿತು. ಕಾಶೀಜಗದ್ಗುರುಗಳ ಈ ವೇಳೆ ಸಾನಿದ್ಯ ವಹಿಸಿದ್ದರು.  | Kannada Prabha

ಸಾರಾಂಶ

ಬೆದವಟ್ಟಿಯ ಲಿಂ. ಶಿವಸಂಗಮೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಾವೇ ಮೊದಲೇ ನಿರ್ಮಿಸಿಕೊಂಡಿದ್ದ ಕ್ರಿಯಾ ಸಮಾಧಿಯಲ್ಲಿ ಶ್ರೀಗಳ ಪಾರ್ಥಿವ ಶರೀರ ಕೂಡ್ರಿಸಿ ಸಮಾಧಿ ಕೆಳಭಾಗದಲ್ಲಿ ವಿಭೂತಿ ಗಟ್ಟಿ ಹಾಗೂ ಮರಳು ಉಪ್ಪು ಹಾಕಲಾಯಿತು.

ಕುಕನೂರು:

ತಾವೇ ತಮಗಾಗಿ ಕೆಲ ವರ್ಷಗಳ ಹಿಂದೇಯೇ ನಿರ್ಮಿಸಿಕೊಂಡಿದ್ದ ಕ್ರಿಯಾ ಸಮಾಧಿಯೊಳಗೆ ತಾಲೂಕಿನ ಬೆದವಟ್ಟಿಯ ಲಿಂ. ಶಿವಸಂಗಮೇಶ್ವರ ಶಿವಾಚಾರ್ಯರು ಶಿವ "ಸಂಗಮ " ಆಗಿದ್ದಾರೆ.

ಬುಧವಾರ ಮಧ್ಯಾಹ್ನ ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನಕ್ಕೆ ಗ್ರಾಮದ ಹಿರೇಮಠದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು, ಸ್ವಾಮೀಜಿಗಳು ಶ್ರೀಗಳ ಅಂತಿಮ ದರ್ಶನ ಪಡೆದಿದ್ದರು. ಬುಧವಾರ ರಾತ್ರಿ ವಿವಿಧ ಗ್ರಾಮದಿಂದ ಆಗಮಿಸಿದ ಭಕ್ತರು ರಾತ್ರಿಯಿಡಿ ಭಜನೆ ಮಾಡಿದರು. ಗುರುವಾರ ಬೆಳಗ್ಗೆ ಸಹ ಭಕ್ತರು ತಂಡೋಪತಂಡವಾಗಿ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ಕಷ್ಟ ಎಂದು ಬಂದಾಗ ಶ್ರೀಗಳು ಸನ್ಮಾರ್ಗ ತೋರಿ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಕಂಬನಿ ಮಿಡಿದರು.

ಶ್ರೀಗಳ ಪಾರ್ಥೀವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಾವೇ ಮೊದಲೇ ನಿರ್ಮಿಸಿಕೊಂಡಿದ್ದ ಕ್ರಿಯಾ ಸಮಾಧಿಯಲ್ಲಿ ಶ್ರೀಗಳ ಪಾರ್ಥಿವ ಶರೀರ ಕೂಡ್ರಿಸಿ ಸಮಾಧಿ ಕೆಳಭಾಗದಲ್ಲಿ ವಿಭೂತಿ ಗಟ್ಟಿ ಹಾಗೂ ಮರಳು ಉಪ್ಪು ಹಾಕಲಾಯಿತು. ಶ್ರೀಗಳ ಶಿರ ಭಾಗವನ್ನು ಬಿಲ್ವಪತ್ರೆಗಳಿಂದ ಮುಚ್ಚಿ, ಮೃತ್ತಿಕೆ ಹಾಕಿ ಕಲ್ಲು ಹಾಸು ಹೊದಿಸಲಾಯಿತು.

ಶ್ರೀಗಳ ಕ್ರಿಯಾ ಸಮಾಧಿ ನಂತರ ಭಕ್ತರು ಸಮಾಧಿ ಸ್ಥಳಕ್ಕೆ ಹೋಗಿ ನಮಸ್ಕರಿಸಿ ತೆರಳಿದರು. ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದರು. ಹೀಗಾಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.

ಕಾಶೀಯ ಮಲ್ಲಿಕಾರ್ಜುನ ಶಿವಾಚಾರ್ಯರು ಬೆದವಟ್ಟಿಯ ಶಿವಸಂಗಮೇಶ್ವರ ಶಿವಾಚಾರ್ಯರು ಕ್ರಿಯಾ ಸಮಾಧಿಯ ಸಾನ್ನಿಧ್ಯ ವಹಿಸಿದ್ದರು. ಎಲ್ಲ ವಿಧಿ-ವಿಧಾನ ಆಗುವವರೆಗೂ ಇದ್ದರು. ಶಿವಸಂಗಮೇಶ್ವರ ಶ್ರೀಗಳು ಜಂಗಮತ್ವದ ಶಿರೋಮಣಿಯಾಗಿದ್ದರು. ಧರ್ಮದ ಆರಾಧಕರಾಗಿದ್ದರು. ಭಕ್ತರನ್ನು ಹತ್ತಿರ ಕರೆದು ಅವರ ನೋವು ಅಳಿಸುವ ಶಕ್ತಿವಂತರಾಗಿದ್ದರು. ದಿವ್ಯದೃಷ್ಟಿಯಿಂದ ಭವಿಷ್ಯತ್ ಕಾಲದ ಜ್ಞಾನ ಅವರಲ್ಲಿತ್ತು ಎಂದು ಕಾಶೀ ಜಗದ್ಗುರುಗಳು ಹೇಳಿದರು. ಸಮಾಧಿ ವರೆಗೂ ಅಪಾರ ಸಂಖ್ಯೆಯ ಹರಹಗುರುಚರಮೂರ್ತಿಗಳು ನೇತೃತ್ವ ವಹಿಸಿದ್ದರು.

ರಂಭಾಪುರಿ ಶ್ರೀಗಳ ಸಂತಾಪ:

ಶಿವಸಂಗಮೇಶ್ವರ ಶಿವಾಚಾರ್ಯರ ಅಗಲಿಕೆಗೆ ರಂಭಾಪುರಿ ಪಂಚಪೀಠದ ಜಗದ್ಗುರುಗಳು ಸಂತಾಪ ನುಡಿ ಸಲ್ಲಿಸಿದ್ದಾರೆ. ಧರ್ಮ, ಸಂಸ್ಕೃತಿ, ಆದರ್ಶ ಪರಂಪರೆ ಆರಾಧಕರು ಶಿವಸಂಗಮೇಶ್ವರ ಶಿವಾಚಾರ್ಯರು ಆಗಿದ್ದರು. ಬದುಕಿನೂದ್ದಕ್ಕೂ ಆಚಾರ, ವಿಚಾರ ಕಾಪಾಡಿಕೊಂಡು ಬಂದಿದ್ದರು ಎಂದು ಪತ್ರ ಮೂಲಕ ಸಂತಾಪ ನುಡಿ ಕಳುಹಿಸಿದ್ದಾರೆ.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌