ಪ್ರೌಢಶಾಲೆಯ ಕಾರ್ಯಕ್ರಮ ಜ. 16 ರಂದು । ಜ. 17, 18, 19ರಂದು ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವ
ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯು ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದು, ತನ್ನ ಅಮೃತ ಮಹೋತ್ಸವ ಹಾಗೂ ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವಗಳನ್ನು 2026ರ ಜನವರಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಅಶೋಕ ರಾಣೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1944ರಲ್ಲಿ ದಿವಂಗತ ಶಂಕರ ಬಾಬಿ ಸಾವಂತ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಈ ಸಂಸ್ಥೆ, ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದು, ಇದೀಗ ಸಂಭ್ರಮಾಚರಣೆಗೆ ಅಣಿಯಾಗುತ್ತಿದೆ ಎಂದರು.ಶಿವಾಜಿ ಶಿಕ್ಷಣ ಸಂಸ್ಥೆ ಹಾಗೂ ಶಿವಾಜಿ ಬಾಲಕರ ಪ್ರೌಢಶಾಲೆಯ ಅಮೃತ ಮಹೋತ್ಸವವು ಜ. 16 ರಂದು ಜರುಗಲಿದೆ. ಸಂಸ್ಥೆಯ ಇತರೆ ಅಂಗಸಂಸ್ಥೆಗಳ ಸುವರ್ಣ ಮತ್ತು ಬೆಳ್ಳಿ ಮಹೋತ್ಸವಗಳನ್ನು ಜ. 17, 18 ಮತ್ತು 19ರಂದು ಸತತ ನಾಲ್ಕು ದಿನಗಳ ಕಾಲ ಆಚರಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಶಾಸಕ ಸತೀಶ್ ಕೆ.ಸೈಲ್ ಅವರನ್ನು ಗೌರವಾಧ್ಯಕ್ಷರನ್ನಾಗಿ ಹಾಗೂ ಹಳೆ ವಿದ್ಯಾರ್ಥಿ ವಿನಾಯಕ ಸೈಲ್ ಅವರನ್ನು ಅಧ್ಯಕ್ಷರನ್ನಾಗಿ ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹೋತ್ಸವದ ಅಂಗವಾಗಿ, ₹4 ಕೋಟಿ ವೆಚ್ಚದಲ್ಲಿ ಪಿಯು ಕಾಲೇಜಿಗೆ ನೂತನ ಕಟ್ಟಡ, ₹1.20 ಕೋಟಿ ವೆಚ್ಚದಲ್ಲಿ ಮಹಿಳಾ ವಸತಿ ನಿಲಯದ ವಿಸ್ತರಣೆ, ₹45 ಲಕ್ಷ ವೆಚ್ಚದಲ್ಲಿ ನಾಲ್ಕು ಶಾಲಾ ಬಸ್‌ಗಳ ಖರೀದಿ, ಆಟದ ಮೈದಾನದ ಅಭಿವೃದ್ಧಿಗೆ ₹25 ಲಕ್ಷ ಮೀಸಲು ಇರಿಸಿದ್ದು, ಮುಂಬೈ ಉದ್ಯಮಿ ಶಿವಾನಂದ ದತ್ತಾತ್ರಯ ಸಾವಂತ ಸಿಎಸ್‌ಆರ್ ಅಡಿಯಲ್ಲಿ ₹3.60 ಕೋಟಿ ಮೌಲ್ಯದ ಸುಸಜ್ಜಿತ ಕಟ್ಟಡವನ್ನು ಈಗಾಗಲೇ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಸಂಸ್ಥೆಯ ಪ್ರಮುಖರಾದ ಪ್ರಕಾಶ್ ರಾಣೆ, ಕಿಶೋರ್ ರಾಣೆ, ಶಿವಾನಂದ ಕದಮ್ ಇದ್ದರು.