ಹಳಿಯಾಳ: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡು ಹಳಿಯಾಳ ತಾಲೂಕು ಸೇರಿದಂತೆ ಅಕ್ಕಪಕ್ಕದ ಊರುಗಳ ಮಕ್ಕಳಲ್ಲಿ ಜ್ಞಾನ ದೀವಿಗೆ ಬೆಳಗಿಸುವುದರೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಶ್ರೇಯಸ್ಸು ಹೆಮ್ಮೆಯ ಶಿವಾಜಿ ಸರ್ಕಾರಿ ವಿದ್ಯಾಲಯಕ್ಕೆ ಸಲ್ಲುತ್ತದೆ ಎಂದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸತ್ಯಜಿತ ಗಿರಿ ಹೇಳಿದರು.
ಬುಧವಾರ ಪಟ್ಟಣದ ಶಿವಾಜಿ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಶತಮಾನೋತ್ಸವ ಆಚರಣಾ ಸಮಿತಿ ಜೊತೆಗೂಡಿ ವಿದ್ಯಾಲಯದ ಶತಮಾನೋತ್ಸವದ ಸ್ಮರಣ ಸಂಚಿಕೆ ಶತಸಿರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ನಮ್ಮ ನಿರೀಕ್ಷೆಗೂ ಮೀರಿ ವಿದ್ಯಾಲಯದಲ್ಲಿ ವಿದ್ಯೆ ಪಡೆದ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿ ಹಳೆಯ ಶಾಲಾ ದಿನಗಳನ್ನು ಮೆಲಕು ಹಾಕಿದರು. ದೇಶ ವಿದೇಶದಿಂದಲೂ ರಾಜ್ಯದೆಲ್ಲೆಡೆಯಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಮಾಜಿ ಶಾಸಕ ಸುನೀಲ ಹೆಗಡೆ, ವಿಪ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ವಿದ್ಯಾಲಯದ ಹಳೆಯ ಮತ್ತು ಹಾಲಿ ವಿದ್ಯಾರ್ಥಿಗಳ ಹಿತಚಿಂತಕರ ಸಹಕಾರದಲ್ಲಿ ವಿದ್ಯಾಲಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಲೆಕ್ಕಪತ್ರ:ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಖಜಾಂಚಿ ಶ್ರೀಪಾದ ಗೋಪಾಲರಾವ ಮಾನಗೆ ಶತಮಾನೋತ್ಸವದ ಖರ್ಚು -ವೆಚ್ಚಗಳ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಿದರು.
ದಾನಿಗಳಿಂದ ಮತ್ತು ಜಾಹೀರಾತುಗಳಿಂದ ₹24.36 ಲಕ್ಷ ಸಂಗ್ರಹವಾಗಿದೆ. ಅದರಲ್ಲಿ ಶಾಮಿಯಾನಕ್ಕೆ ₹6.61 ಲಕ್ಷ, ಊಟ ಮತ್ತು ಉಪಹಾರಕ್ಕೆ ₹4.81 ಲಕ್ಷ ಹಾಗೂ ಇತರೆ ಸೇರಿ 19.66 ಲಕ್ಷ ಖರ್ಚಾಗಿದೆ. ₹4.70 ಲಕ್ಷ ಉಳಿದಿದೆ ಎಂದು ತಿಳಿಸಿದರು.ಸಭೆಯಲ್ಲಿ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ದಿಲೀಪ್ ಪಡ್ನೀಸ್, ಗುರುದಾಸ ವೆರ್ಣೆಕರ, ಉಮೇಶ ಬೊಳಶೆಟ್ಟಿ, ಶಿವಕುಮಾರ ಕತ್ತಿಶೆಟ್ಟರ, ಮೆಹಬೂಬ್ ಸುಬಾನಿ ಹುಬ್ಬಳ್ಳಿ, ಕಮಲ ಸಿಕ್ವೇರಾ, ಚೇತನ ದೇಸಾಯಿ, ಎಪ್.ಎಸ್. ಗೌಡ, ಶಾಂತಾ ಹಿರೇಮಠ, ಮಹಾದೇವಿ ಆನೆಗುಂದಿ, ಅನಿಲ ಚವ್ಹಾನ, ನಿಂಗರಾಜ ಹಳ್ಳಿಕೇರಿ ಇದ್ದರು.