ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಶ್ರೀಕನ್ನಡಪ್ರಭ ವಾರ್ತೆ ಸಂಡೂರು
ವಿಯಟ್ನಾಂ ಎನ್ನುವ ದೇಶ ಅಮೇರಿಕಾವನ್ನು ಮಣಿಸಲು ಪ್ರೇರಣೆಯಾಗಿದ್ದು ಛತ್ರಪತಿ ಶಿವಾಜಿಯವರು ಅನುಸರಿಸಿದ ಗೆರಿಲ್ಲಾ ಯುದ್ಧ ನೀತಿ. ಛತ್ರಪತಿ ಶಿವಾಜಿಯವರು ಗೆರಿಲ್ಲಾ ಯುದ್ಧತಂತ್ರವನ್ನು ರೂಪಿಸಿದ್ದಲ್ಲದೆ, ತಮ್ಮ ಉತ್ತಮ ಆಡಳಿತ, ದೇಶಭಕ್ತಿಯಿಂದ ದೇಶದ ಗಡಿ ಮೀರಿ ಬೆಳೆದ ಮಹಾರಾಜರು ಎಂದು ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಅಭಿಪ್ರಾಯಪಟ್ಟರು.ಪಟ್ಟಣದ ಮರಾಠ ಸಮಾಜದ ಕಲ್ಯಾಣ ಮಂಟಪದಲ್ಲಿ ಮರಾಠ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಪತನದ ನಂತರದಲ್ಲಿ ದಕ್ಷಿಣ ಭಾರತದಲ್ಲಿ ಉಂಟಾಗಿದ್ದ ಅಭದ್ರತೆಯನ್ನು ಹೋಗಲಾಡಿಸಿದವರೆಂದರೆ ಛತ್ರಪತಿ ಶಿವಾಜಿ ಹಾಗೂ ಅವರ ಮಗನಾದ ಸಾಂಭಾಜಿ. ಅವರು ದಕ್ಷಿಣ ಭಾರತವನ್ನು ಸುಭದ್ರವಾಗಿ ಕಟ್ಟಿದರು. ತಮ್ಮ ಉತ್ತಮ ಆಡಳಿತದ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದರು ಎಂದರು.ಕರ್ನಾಟಕ ಹಾಗೂ ಮಹರಾಷ್ಟ್ರದ ನಡುವಿನ ಸಾಂಸ್ಕೃತಿಕ ಸಂಬಂಧಕ್ಕೆ ಉಜ್ವಲ ಇತಿಹಾಸವಿದೆ. ಶಿವಾಜಿಯವರ ತಂದೆ ಶಹಾಜಿ ಭೋಸ್ಲೆಯವರ ಸಮಾದಿ ಚನ್ನಗಿರಿ ತಾಲೂಕಿನಲ್ಲಿದೆ. ಶಿವಾಜಿಯವರು ಅಣ್ಣಿಗೇರಿ ಬಳಿಯ ದೇವಸ್ಥಾನಕ್ಕೆ ದತ್ತಿ ದಾನ ನೀಡಿದ್ದಾರೆ. ಶಿವಾಜಿಯವರ ತಾತನವರು ಬೆಂಗಳೂರಿನಲ್ಲಿ ದೇವಸ್ಥಾನ ಕಟ್ಟಿಸಿದರು. ಮಹಾರಾಷ್ಟ್ರದಲ್ಲಿ ಬಸವಣ್ಣನವರ ಜಯಂತಿ ಸರ್ಕಾರದಿಂದ ಆಚರಿಸಲ್ಪಟ್ಟರೆ, ಕರ್ನಾಟಕದಲ್ಲಿ ಛತ್ರಪತಿ ಶಿವಾಜಿ ಜಯಂತಿ ಸರ್ಕಾರದಿಂದ ಆಚರಿಸಲ್ಪಡುತ್ತಿದೆ. ಎಲ್ಲರೂ ಛತ್ರಪತಿ ಶಿವಾಜಿಯವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿನೋದ್ ಚೌವ್ಹಾಣ್ ಛತ್ರಪತಿ ಶಿವಾಜಿಯವರ ಜೀವನ, ಸಾಧನೆಗಳು ಹಾಗೂ ಆದರ್ಶಗಳ ಕುರಿತು ಉಪನ್ಯಾನ ನೀಡಿದರು. ನಂತರದಲ್ಲಿ ಛತ್ರಪತಿ ಶಿವಾಜಿ ಮಹರಾಜರ ಪುತ್ಥಳಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯವಾಗಿ ಮೆರವಣಿಗೆ ಮಾಡಲಾಯಿತು.ಸಂಸದ ಈ. ತುಕಾರಾಂ, ಶಾಸಕಿ ಈ. ಅನ್ನಪೂರ್ಣ ತುಕಾರಾಂ, ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್, ಮರಾಠ ಸಮಾಜದ ಅಧ್ಯಕ್ಷ ನಾರಾಯಣರಾವ್ ನಿಂಬಾಳ್ಕರ್, ಉಪಾಧ್ಯಕ್ಷ ಹನುಮಂತರಾವ್, ಕಾರ್ಯಾಧ್ಯಕ್ಷ ಮಾರುತಿರಾವ್, ಜೀಜಾಬಾಯಿ ಸಂಘದ ಅಧ್ಯಕ್ಷೆ ಶಕುಂತಲಾಬಾಯಿ ಮೋರೆ, ಮರಾಠ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಾರುತಿರಾವ್ ಭೋಸ್ಲೆ, ಮರಾಠ ಸಮಾಜದ ಮುಖಂಡರು ಉಪಸ್ಥಿತರಿದ್ದರು.