28ರಂದು ಎಕಂಬಾದಲ್ಲಿ ಶಿವಾಜಿ ಮೂರ್ತಿ ಅನಾವರಣ

KannadaprabhaNewsNetwork | Published : May 27, 2024 1:05 AM

ಸಾರಾಂಶ

ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಶ್ವರೂಢ ಮೂರ್ತಿ ಅನಾವರಣ ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಇದೇ ತಿಂಗಳ 28ರಂದು ಸಂಜೆ 6 ಗಂಟೆ ಔರಾದ್ ತಾಲೂಕಿನ ಎಕಂಬಾ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಆಶ್ವರೂಢ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಗ್ರಾಮದ ಮುಖಂಡರಾದ ಪ್ರಥ್ವಿರಾಜ ಪಾಟೀಲ ತಿಳಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 24ರಿಂದಲೇ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ 24ರಂದು ಗ್ರಾಮದೆಲ್ಲೆಡೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮ ಶುಚಿಯಾಗಿಸಲಾಯಿತು.

ಜಾತಿ, ಮತ, ಪಂಥ ಹಾಗೂ ಪಂಗಡವೆಂಬ ಭೇದ ಮರೆತು ಈ ಕಾರ್ಯಕ್ರಮವನ್ನು ಗ್ರಾಮದ ಎಲ್ಲ ಸಮುದಾಯಗಳು ಒಗ್ಗೂಡಿ ಆಯೋಜಿಸಿವೆ. ಮೇ 25ರಂದು ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ 100 ಜನ ಯುವಕರು ರಕ್ತದಾನ ಮಾಡಿದ್ದಾರೆ ಎಂದರು.

ಮೇ 26ರಂದು ಸಂಜೆ ಅಧಿನಾಥ ಮಹಾರಾಜರಿಂದ ಕೀರ್ತನ ಕಾರ್ಯಕ್ರಮ, ಮೇ 27ರಂದು ಶಿವಶಾಹಿರ್ ರಾಜೇಂದ್ರ ಖಡುಸಕರ್‌ರಿಂದ ಭಾರೂಡ ಹಾಗೂ ಅವಿನಾಶ ಭಾರತಿರಿಂದ ಭಾಷಣ ಕಾರ್ಯಕ್ರಮ ಜರುಗಲಿದೆ ಎಂದರು.

ಮೇ 28ರಂದು ಸಂಜೆ 6 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಾಂಬಾಜಿರಾಜೆರಿಂದ ನೂತನವಾಗಿ ನಿರ್ಮಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಮೂರ್ತಿ ಅನಾವರಣ ಕಾರ್ಯಕ್ರಮ ನೆರವೇರಿಸುವರು. ಬೆಂಗಳೂರಿನ ಪೂಜ್ಯ ಮಂಜುನಾಥ ಸ್ವಾಮಿ, ಶ್ರೀಕರ್ಣ ಗಜೇಂದ್ರ ಮಹಾರಾಜ ಹಾಗೂ ಸ್ಥಳೀಯ ಗ್ರಾಪಂ ಅಧ್ಯಕ್ಷೆ ತುಳಸಾಬಾಯಿ ನಾಮದೇವ ಜಾಧವ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಛತ್ರಪತಿ ಶಿವಾಜಿ ಮಹಾರಾಜರು 18 ಜಾತಿ, ಜನಾಂಗದವರಿಗೆ ಆಶ್ರಯ ನೀಡಿದ ದೊರೆ. ಹಾಗಾಗಿ ಅವರ ಮೂರ್ತಿ ಅನಾವರಣದ ಈ ಅಪರೂಪ ಕಾರ್ಯಕ್ರಮಕ್ಕೆ ಎಲ್ಲ ಸಮುದಾಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಪ್ರಥ್ವಿರಾಜ ಪಾಟೀಲ ಮನವಿ ಮಾಡಿದರು.

ಎಕಂಬಾ ಗ್ರಾಮದ ಪ್ರಮುಖರಾದ ಆಕ್ಷಯ ಪಾಟೀಲ, ಸತೀಶ ವಾಸರೆ, ಡಾ.ಅಮಿತ ಹಂಗರಗೆ, ಗುಂಡಾಜಿ ಪಾಟೀಲ, ಧನರಾಜ ಪಾಟೀಲ, ಲಕ್ಷ್ಮಣ ಉಪಾಸೆ, ಸಂದೀಪ ನೇಳಗೆ ಇದ್ದರು.

Share this article