ಕನ್ನಡಪ್ರಭ ವಾರ್ತೆ ಬೆಳಗಾವಿ
ಶಿವಾಜಿಯನ್ನು ಕೇವಲ ಮರಾಠಾ ಎಂದು ನೋಡದೆ ನಮ್ಮ ರಕ್ಷಕರು ಎಂದು ನೋಡಬೇಕು. ಅವರು ಇಡೀ ದೇಶದ ಆಸ್ತಿ. ಅವರೊಬ್ಬ ಗ್ರೇಟ್ ಇಂಡಿಯನ್ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ನಗರದಲ್ಲಿ ಭಾನುವಾರ ಡಾ.ಸರಜೂ ಕಾಟ್ಕರ್ ಅವರ ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠಾ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇಶದ ಇತಿಹಾಸ ತಿಳಿಯಲು ಇಂತಹ ಪುಸ್ತಕ ಅಗತ್ಯವಾಗಿದೆ. ಶಿವಾಜಿ ಕುರಿತು ಈ ಪುಸ್ತಕದಲ್ಲಿ ನೈಜ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸರಿಯಾದ ದೃಷ್ಟಿ ಕೋನದಿಂದ ಓದಬೇಕು. ವಿಚಾರಿಸಿ ಪ್ರತಿಕ್ರಿಯಿಸಬೇಕು. ತಾಂತ್ರಿಕತೆಯಿಂದ ನಾವು ನೈಜತೆ ಕಳೆದುಕೊಂಡಿದ್ದೇವೆ. ಪ್ರತಿಕ್ರಿಯಿಸುವ ಮುನ್ನ ನಿಜವಾದ ಉದ್ದೇಶ, ವಸ್ತು-ವಿಷಯ ತಿಳಿದುಕೊಳ್ಳಬೇಕು ಎಂದರು.ಶಿವಾಜಿ ಮರಾಠಕ್ಕಷ್ಟೇ ಸೀಮಿತವಲ್ಲ, ಬಸವಣ್ಣ ಲಿಂಗಾಯತರಿಗಷ್ಟೇ ಸೀಮಿತವಲ್ಲ ಹಾಗೆಯೇ ಅಂಬೇಡ್ಕರ್ ದಲಿತರಿಗಷ್ಟೇ ಸೀಮಿತರಾದವರಲ್ಲ. ಹಾಗಾಗೀ ನಿಜಾಂಶ ತಿಳಿದುಕೊಳ್ಳಬೇಕು. ನಾವು ಶಿವಾಜಿಯನ್ನು ಸಮಾಜವಾದಿ ಎಂದು ಗುರುತಿಸುತ್ತೇವೆ. ಶಿವಾಜಿ ಜೊತೆಗೆ ಹಿಂದೂಗಳಿಗಿಂತ ಮುಸ್ಲಿಮರೇ ಹೆಚ್ಚಾಗಿದ್ದರು. ಶಿವಾಜಿ ರಕ್ಷಣೆಗೆ ಮುಸ್ಲಿಮರೇ ಇದ್ದರು. ಎಲ್ಲರ ಜೊತೆ ಅವರ ಸಂಬಂಧ ಉತ್ತಮವಾಗಿತ್ತು. ಆದರೆ ಇಂದು ಬೇರೆ ರೀತಿ ಹೋಗುತ್ತಿದೆ. ರಾಷ್ಟ್ರದ ರಕ್ಷಣೆ ಅವರ ಉದ್ದೇಶವಾಗಿತ್ತು, ಕೇವಲ ಮರಾಠರ ರಕ್ಷಣೆಯಲ್ಲ ಎಂದು ಸಚಿವರು ಹೇಳಿದರು.ಹಲವು ಬಾರಿ ಶಿವಾಜಿಯ ಹತ್ಯೆಗೆ ಪ್ರಯತ್ನ ನಡೆದಿತ್ತು. ಪ್ರಯತ್ನಿಸಿದವರು ಮುಸ್ಲಿಮರಲ್ಲ, ಹಿಂದೂಗಳೇ ಎಂದರು. ಅವರೊಬ್ಬ ದೂರದೃಷ್ಟಿಯ ನಾಯಕರಾಗಿದ್ದರು. ಶೂದ್ರ ಎನ್ನುವ ಕಾರಣಕ್ಕೆ ಪಟ್ಟಾಭಿಷೇಕ ಮಾಡಲು ತಡೆಯಲಾಗಿತ್ತು. ಹೆಸರು ಮಾಡುತ್ತಾನೆ ಎಂದು ಸಮಾಧಿ ಮುಚ್ಚಿಡಲಾಗಿತ್ತು. ಇಂದು ಅವರ ಪರವಾಗಿರುವವರೇ ಅಂದು ಅವರ ವಿರೋಧಿಗಳಾಗಿದ್ದರು. ನಿಜವಾದ ಇತಿಹಾಸ ತಿಳಿದುಕೊಳ್ಳುವವರೆಗೆ ಗೊಂದಲ, ಹೊಡೆದಾಟ ಇರುತ್ತದೆ. ಮೊಬೈಲ್ ಬಂದ ಮೇಲೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತಿದೆ. ಇಂದು ಲೆಫ್ಟ್, ರೈಟ್ ಎಂಬುವುದು ದೇಶ ಬೆಳೆಯಲು ಮಾರಕವಾಗಿದೆ. ಅವರು ಈಕಡೆ ಬರುವುದಿಲ್ಲ, ಇವರು ಆ ಕಡೆ ಬರುವುದಿಲ್ಲ ಎಂದು ಹೇಳಿದರು.
ಡಾ.ಮನು ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಗುರುದೇವಿ ಹುಲೆಪ್ಪನವರಮಠ ಮತ್ತು ಯ.ರು.ಪಾಟೀಲ ಕೃತಿ ಪರಿಚಯ ಮಾಡಿದರು. ಡಾ.ಸರಜೂ ಪಾಟೀಲ ಮಾತನಾಡಿದರು. ಸುಮಾ ಕಾಟ್ಕರ್ ವೇದಿಕೆಯಲ್ಲಿದ್ದರು. ಡಾ. ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ್ ನಿರೂಪಿಸಿದರು.