ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಪಿಜಿಎಂ ಕಲ್ಯಾಣಮಂಟಪದಲ್ಲಿ ವೀರಶೈವಾನಂದಾಶ್ರಮದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠದಲ್ಲಿ ವಿದ್ಯಾರ್ಥಿಗಳನ್ನಿಟ್ಟುಕೊಂಡು ಅವರಿಗೆ ಊಟ, ವಸತಿ ಜೊತೆಗೆ ವಿದ್ಯೆ ನೀಡುವ ಪದ್ದತಿ ಮೊದಲು ಇರಲಿಲ್ಲ. ಜಯದೇವ ಜಗದ್ಗುರುಗಳು ವೀರಶೈವ ಲಿಂಗಾಯಿತ ಮಠಗಳಲ್ಲಿ ತ್ರಿವಿಧ ದಾಸೋಹದ ಒಂದು ಹೊಸ ಪರಂಪರೆಯನ್ನೇ ಹುಟ್ಟುಹಾಕಿದರು. ೧೯೧೩ರಲ್ಲಿಯೇ ಜಯದೇವ ಜಗದ್ಗುರುಗಳು ತ್ರಿವಿಧದಾಸೋಹ ಪದ್ದತಿ ಪ್ರಾರಂಭಿಸಿದ್ದರು.ಇದರಿಂದ ಮುಂದೆ ಶೈಕ್ಷಣಿಕ ಕ್ರಾಂತಿಗೆ ಕಾರಣವಾಯಿತು.
ಜಯದೇವ ಜಗದ್ಗುರುಗಳ ಪಟ್ಟಾಭಿಷೇಕವಾದ ಒಂದು ವರ್ಷದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವಾಯಿತು. ಒಡೆಯರದ್ದು ರಾಜಮಾರ್ಗವಾದರೆ, ಜಯದೇವರದ್ದು ಋಷಿಮಾರ್ಗ. ಇಬ್ಬರೂ ತಮ್ಮ ಕೆಲಸಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹರಿಕಾರರಾಗಿದ್ದರು. ಜಯದೇವ ಜಗದ್ಗುರುಗಳನ್ನು ಋಷಿರಾಜ ಎಂದು ಕರೆದರೆ ಒಡೆಯರನ್ನು ರಾಜಋಷಿ ಎಂದು ಕರೆಯಲಾಯಿತು. ಜಯದೇವರು ಅಂದಿನಕಾಲಘಟ್ಟದಲ್ಲಿ ವಿದ್ಯಾರ್ಥಿ ಪ್ರಸಾದ ನಿಲಯ ಪ್ರಾರಂಭಿಸದಿದ್ದರೆ ವೀರಶೈವ-ಲಿಂಗಾಯಿತ ಸಮಾಜ ಇಷ್ಟು ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ವೀರಶೈವ-ಲಿಂಗಾಯಿತ ಮಠ-ಮಾನ್ಯಗಳು ಸಮಾಜದ ಯುವಜನರಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಬೆಳೆಸುತ್ತಿವೆ. ಸರಕಾರ ಸರ್ವರಿಗೂ ಶಿಕ್ಷಣ ಅಭಿಯಾನ ನಡೆಸುತ್ತಿದ್ದರೂ ಮಠಗಳು ಶಿಕ್ಷಣಕ್ಷೇತ್ರಕ್ಕೆ ಬರದಿದ್ದರೆ ಸರ್ವರಿಗೂ ಶಿಕ್ಷಣ ನೀಡುವುದು ಕಷ್ಟವಾಗುತ್ತಿತ್ತು. ವೀರಶೈವ ಸಮಾಜ ಅನ್ನದಾನ ಮಾಡುವ ಪರಿಪಾಠವಿತ್ತು ಈಗ ಎಲ್ಲ ಸಮಾಜದವರೂ ಇದನ್ನು ಪಾಲಿಸುತ್ತಿದ್ದಾರೆ. ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದರೆ ಮಾತ್ರ ಸಮಾಜ ಬೆಳವಣಿಗೆಯಾಗುತ್ತೆ ಎಂದರು.ನೊಣವಿನಕೆರೆಯ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮಾತನಾಡಿ ಇಂದು ವೀರಶೈವಧರ್ಮ ಸ್ಥಾಪನೆಗೆ ಕಾರಣವಾದ ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ಜಯದೇವ ಜಗದ್ಗುರುಗಳ ಹುಟ್ಟುಹಬ್ಬ ಕೂಡ ಬಂದಿದೆ. ಮನುಷ್ಯನ ಬದುಕಿನಲ್ಲಿ ಧರ್ಮ ಹಾಗೂ ಸಮಾಜ ಎರಡೂ ಬಹಳ ಮುಖ್ಯವಾಗಿರುತ್ತದೆ. ಜಗದ್ಗುರು ಪಂಚಾಚಾರ್ಯರ ಆಶೀರ್ವಾದದಿಂದ ಇಂದು ನಾವು ಕೊರಳಿನಲ್ಲಿ ಲಿಂಗು ಕಟ್ಟಿ ಪೂಜೆ ಮಾಡುತ್ತೇವೆ. ಅದೇರೀತಿ ಹಿರಿಯ ಜಗದ್ಗುರುಗಳ ಆಶೀರ್ವಾದ ಮಾರ್ಗದರ್ಶನದಿಂದ ಸಂಸ್ಕಾರವನ್ನು ಪಾಲಿಸುತ್ತೇವೆ. ರಾಜ್ಯದಾದ್ಯಂತ ಜಯದೇವರು ವಸತಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲ ಕಲ್ಪಿಸಿದರು ಎಂದರು. ಅಕ್ಕಮಹಾದೇವಿ ಸಮಾಜದವರಿಂದ ವಚನಗಾಯನ ನಡೆಯಿತು. ವೀರಶೈವಾನಂದಾಶ್ರಮದ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಸಿ.ಗುರುಬಸಪ್ಪ ಸ್ವಾಗತಿಸಿ, ರಮ್ಯಭರತ್ ನಿರೂಪಿಸಿದರು. ಕಾರ್ಯದರ್ಶಿಗಳಾದ ಜಿ.ಎಸ್.ಉಮೇಶ್, ಎಚ್.ಲೋಕೇಶ್, ಟ್ರಸ್ಟಿಗಳಾದ ಟಿ.ಎನ್.ಪರಮಶಿವಯ್ಯ, ಜಿ.ಕೆ.ನಟರಾಜು, ನಿರ್ದೇಶಕರು, ಸಮಾಜದ ಬಂಧುಗಳು ಉಪಸ್ಥಿತರಿದ್ದರು.