ಭಟ್ಕಳದಲ್ಲಿ ಮಳೆ ನೀರಿನಿಂದ ತೊಂದರೆಯಾಗುವ ಪ್ರದೇಶಕ್ಕೆ ಶಿವಕುಮಾರ ಭೇಟಿ

KannadaprabhaNewsNetwork |  
Published : Jun 02, 2025, 12:05 AM IST
ಪೊಟೋ ಪೈಲ್ : 30ಬಿಕೆಲ್1 | Kannada Prabha

ಸಾರಾಂಶ

ಸುರಿಯುತ್ತಿರುವ ಭಾರೀ ಮಳೆಗೆ ಮಣ್ಕುಳಿ, ಶಂಸುದ್ದೀನ್ ಸರ್ಕಲ್ ಹಾಗೂ ರಂಗೀಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ.

ಭಟ್ಕಳ: ಸುರಿಯುತ್ತಿರುವ ಭಾರೀ ಮಳೆಗೆ ಮಣ್ಕುಳಿ, ಶಂಸುದ್ದೀನ್ ಸರ್ಕಲ್ ಹಾಗೂ ರಂಗೀಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮಳೆಗಾಲದಲ್ಲಿ ನೀರು ನಿಲ್ಲದಂತೆ ಮಾಡಲು ಸೂಕ್ತ ಮಾರ್ಗದರ್ಶನ ನೀಡಿದರು.ರಂಗೀಕಟ್ಟೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಳವಡಿಸಲಾಗಿದ್ದ ಮೋರಿಯನ್ನು ಅವರು ಪರಿಶೀಲಿಸಿದರು. ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಪುರಸಭಾ ಪ್ರಭಾರ ಅಧ್ಯಕ್ಷ ಅಲ್ತಾಫ್ ಖರೂರಿ, ಇಲ್ಲಿನ ನೀರು ತಮ್ಮ ವಾರ್ಡಿನ ಮನೆಗಳಿಗೆ ನುಗ್ಗುತ್ತದೆ ಎಂದು ತಿಳಿಸಿದಾಗ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್ ಅವರು ಅಂತಹ ದೂರುಗಳನ್ನು ಜಿಲ್ಲಾಧಿಕಾರಿಗೆ ನೀಡಿ ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಅದೇ ರೀತಿಯಾಗಿ ಪಟ್ಟಣದ ಶಂಶುದ್ದೀನ್ ಸರ್ಕಲ್ ಬಳಿಯಲ್ಲಿ ಕೂಡಾ ಪರಿಶೀಲಿಸಿದರು.

ಈ ವೇಳೆಯಲ್ಲಿ ಮಣ್ಣಿನಿಂದ ತುಂಬಿ ಹೋಗಿದ್ದ ಮೋರಿಯನ್ನು ಹೊಸದಾಗಿ ಅಳವಡಿಸಲು ಸೂಚಿಸಿದರು. ಮಣ್ಕುಳಿ ಭಾಗಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ತಡರಾತ್ರಿ ಹೆದ್ದಾರಿಯಂಚಿನಲ್ಲಿ ನೀರು ಹಾದು ಹೋಗದೇ ಇರುವುದರಿಂದ ಮನೆಗಳಿಗೆ ನೀರು ನುಗ್ಗಿದ್ದು ತೀವ್ರ ತೊಂದರೆಯಾಗಿದೆ ಎಂದೂ ದೂರಿದರು.

ಮಣ್ಕುಳಿಯಲ್ಲಿ ಈ ಹಿಂದೆ ೩ ಮೀಟರ್ ಚರಂಡಿ ಇದ್ದು ಹಾಲಿ ಚರಂಡಿಯನ್ನು ಚಿಕ್ಕದು ಮಾಡಲಾಗಿದ್ದು, ನೀರು ಸರಿಯಾಗಿ ಹರಿದು ಹೋಗಲು ಅವಕಾಶವಿಲ್ಲವಾಗಿದೆ. ಅಲ್ಲದೇ ನೀರು ಹರಿದು ಹೋಗುವಲ್ಲಿ ಅಡೆತಡೆಗಳಿದ್ದು ಅವುಗಳನ್ನು ತಕ್ಷಣ ಸರಿಪಡಿಸಬೇಕಾಗಿದೆ ಎಂದರು. ಅನೇಕ ಕಡೆಗಳಲ್ಲಿ ಹೆದ್ದಾರಿ ಜಾಗಾವನ್ನು ಅತಿಕ್ರಮಿಸಲಾಗಿದ್ದು ನೀರು ಸರಾಗವಾಗಿ ಹೋಗಲು ಅಡ್ಡಿಯಾಗುತ್ತಿದೆ. ತಕ್ಷಣ ಹೆದ್ದಾರಿ ಅಕ್ಕಪಕ್ಕದಲ್ಲಿ ಆಗಿರುವ ಅತಿಕ್ರಮಣ ತೆರವುಗೊಳಿಸಿ ಚರಂಡಿಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದರು.

ನಂತರ ಭಟ್ಕಳ ಪಟ್ದ್ದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಎಲ್ಲೆಲ್ಲಿ ಏನೇನು ಸಮಸ್ಯೆ ಇದೆ ಎನ್ನುವ ಕುರಿತು ಪುರಸಭಾ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಅಲ್ತಾಫ್ ಖರೂರಿ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.

ಭಟ್ಕಳ ಪಟ್ಟಣದಲ್ಲಿ ಮಳೆ ನೀರು ನಿಂತು ತೊಂದರೆ ಆಗುವ ಪ್ರದೇಶಕ್ಕೆ ಪ್ರೊಜೆಕ್ಟ ಡೈರೆಕ್ಟರ್ ಶಿವಕುಮಾರ ಭೇಟಿ ನೀಡಿ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌