ಕನ್ನಡಪ್ರಭ ವಾರ್ತೆ ಅರಸೀಕೆರೆ
ಪೂಜೆಯ ಬಳಿಕ ಮಾತನಾಡಿದ ತಾಲೂಕು ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಕಳೆದ ಹಲವು ವರ್ಷಗಳಿಂದ ಜನಪರ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದಾರೆ. ರೈತರು, ಕಾರ್ಮಿಕರು, ಯುವಕರು ಹಾಗೂ ಎಲ್ಲಾ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಅವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯಸಮ್ಮತವಾಗಿದೆ. ರಾಜ್ಯ ಸರ್ಕಾರವು ಅವರ ಅನುಭವ, ಹಿರಿತನ ಮತ್ತು ಪಕ್ಷದ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು. ಇದರಿಂದ ಅರಸೀಕೆರೆ ಕ್ಷೇತ್ರ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.ಸಮುದಾಯದ ಮುಖಂಡ ಅಡವಿಸ್ವಾಮಿ ಮಾತನಾಡಿ, ಶಾಸಕ ಶಿವಲಿಂಗೇಗೌಡರ ರಾಜಕೀಯ ಭವಿಷ್ಯ ಹಾಗೂ ಸಚಿವ ಸ್ಥಾನದ ಕುರಿತು ದೇವಿಯ ಸನ್ನಿಧಿಯಲ್ಲಿ ಅಪ್ಪಣೆ ಕೇಳಲಾಗಿದ್ದು, ದೇವಿಯ ಕೃಪೆಯಿಂದ ಅವರಿಗೆ ಸಚಿವ ಸ್ಥಾನ ದೊರೆಯುವ ಸೂಚನೆ ಲಭಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶಿವಲಿಂಗೇಗೌಡರಿಗೆ ಉನ್ನತ ಜವಾಬ್ದಾರಿ ನೀಡಿದರೆ ಅರಸೀಕೆರೆ ತಾಲೂಕಿನ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಕಾಟಿಕೆರೆ ಉಮೇಶ್ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಪ್ರಮುಖ ಶಾಸಕರಲ್ಲಿ ಶಿವಲಿಂಗೇಗೌಡರು ಒಬ್ಬರಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಸೇರಿದಂತೆ ನೆರೆಯ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ಬಲ ದೊರೆಯಲಿದೆ ಎಂದರು.ಕ್ಷೇತ್ರದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಶಿವಲಿಂಗೇಗೌಡರ ಕಾರ್ಯವೈಖರಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಅವರ ಸೇವೆ ಮತ್ತು ಅನುಭವವನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ಸಮುದಾಯದ ಒಗ್ಗಟ್ಟಿನ ಅಭಿಪ್ರಾಯವಾಗಿದೆ ಎಂದು ಹೇಳಿದರು.