ಶಿವಮೊಗ್ಗ: ಕಳೆಗಟ್ಟಿದ ರೈತ, ಕಲಾ ದಸರಾ

KannadaprabhaNewsNetwork |  
Published : Sep 26, 2025, 01:00 AM IST
ಪೋಟೊ: 25ಎಸ್‌ಎಂಜಿಕೆಪಿ02ಶಿವಮೊಗ್ಗದ ಮಹಾನಗರ ಪಾಲಿಕೆ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ  ರೈತ ದಸರಾ ಕಾರ್ಯಕ್ರಮವನ್ನು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಟಿ.ಎಂ ಈರಪ್ಪನಾಯಕ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಾನಗರ ಪಾಲಿಕೆಯಿಂದ ಆಚರಿಸುತ್ತಿರುವ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ರೈತ ದಸರಾದ ಎತ್ತಿನ ಗಾಡಿ ಜಾಥಾಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪ್ರಗತಿಪರ ರೈತರಾದ ಕಮಲಮ್ಮ, ಟೀಕಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಾನಗರ ಪಾಲಿಕೆಯಿಂದ ಆಚರಿಸುತ್ತಿರುವ ನಾಡಹಬ್ಬ ದಸರಾ ಅಂಗವಾಗಿ ಗುರುವಾರ ರೈತ ದಸರಾದ ಎತ್ತಿನ ಗಾಡಿ ಜಾಥಾಕ್ಕೆ ನಗರದ ಸೈನ್ಸ್ ಮೈದಾನದಲ್ಲಿ ಪ್ರಗತಿಪರ ರೈತರಾದ ಕಮಲಮ್ಮ, ಟೀಕಪ್ಪ ಚಾಲನೆ ನೀಡಿದರು.

ನಗರದ ಸುತ್ತಮುತ್ತ ಹಳ್ಳಿಗಳಿಂದ ಬಂದ ರೈತರು ಅಲಂಕೃತ ಎತ್ತಿನ ಗಾಡಿ, ಟ್ರಾಕ್ಟರ್ ಮತ್ತು ಟಿಲ್ಲರ್‌ಗಳ ಮೆರವಣಿಗೆ ಮಾಡಿದರು. ಸೈನ್ಸ್ ಮೈದಾನದಲ್ಲಿ ರೈತರ ಸಂಭ್ರಮ ಸಡಗರ ಜೋರಾಗಿತ್ತು. ಡೊಳ್ಳು ಕುಣಿತವೂ ಇದ್ದು, ನೂರಾರು ರೈತರು ಹಸಿರು ಟವೆಲ್ ಮತ್ತು ಬಿಳಿ ಪಂಚೆ ಧರಿಸಿ ದಸರಾ ಹಬ್ಬಕ್ಕೆ ಮೆರುಗು ನೀಡಿದರು.

ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿ ನಾಗೇಂದ್ರ, ನೌಕರರಾದ ಗೋವಿಂದಪ್ಪ, ರೈತ ಸಮಿತಿ ಸದಸ್ಯ ಕಾರ್ಯದರ್ಶಿ ವಿಕಾಸ್, ಪಿ.ಕುಮಾರ್, ಎಚ್.ಡಿ.ಮಂಜಣ್ಣ, ಮಂಜುನಾಥ್, ಕಾರ್ತಿಕ್, ಸುಧಾಕರ್, ಕೆಳದಿ ಶಿವಪ್ಪನಾಯಕ ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್, ವೈ.ಎಚ್.ನಾಗರಾಜ್, ರೈತ ಮುಖಂಡರು, ರೈತ ಮಹಿಳೆಯರು, ಮಹಾನಗರ ಪಾಲಿಕೆ ಸಿಬ್ಬಂದಿ ವರ್ಗದವರು ಇದ್ದರು. ಮೆರವಣಿಗೆಯು ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರವರೆಗೆ ನಡೆಯಿತು.

ಮಿಶ್ರ ಬೆಳೆ ರೈತನಿಗೆ ಆಸರೆ:

ಮಹಾನಗರ ಪಾಲಿಕೆಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಟಿ.ಎಂ.ಈರಪ್ಪನಾಯಕ, ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೆ ಮಿಶ್ರ ಬೆಳೆಯನ್ನ ಬೆಳೆಯುವ ಮೂಲಕ ಆರ್ಥಿಕ ನಷ್ಟವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಈಗ ಅಡಕೆ ಬೆಳೆಗೆ ಮಾರು ಹೋಗುತ್ತಿದ್ದಾರೆ. ಆದರೆ, ಇದರಿಂದ ರೈತರಿಗೆ ಹೆಚ್ಚಿನ ಲಾಭಕ್ಕಿಂತ ನಷ್ಟವೇ ಇದೆ. ಸಾಕಷ್ಟು ಪೋಷಣೆ ಮಾಡಬೇಕಾಗುತ್ತದೆ. ಕ್ರಿಮಿನಾಶಕದ ಸಿಂಪರಣೆಯೂ ಕೂಡ ಅಷ್ಟೇ ಪ್ರಮಾಣದಲ್ಲಿ ಮಾಡಬೇಕಾಗುತ್ತದೆ. ಇದು ಲಾಭವಲ್ಲ ಆದ್ದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಮತ್ತು ಲಾಭವನ್ನು ಪಡೆಯುವಂತಹ ಬೆಳೆಗಳ ಕಡೆ ರೈತರು ಮುಖ ಮಾಡಬೇಕು ಎಂದು ಕರೆ ನೀಡಿದರು.

ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ನಾವು ಮಣ್ಣಿನ ಮತ್ತು ಬೀಜದ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಾಗಿದೆ. ಅಧಿಕ ಇಳುವರಿಯನ್ನು ತೆಗೆಯುವ ನಿಟ್ಟಿನಲ್ಲಿ ನಾವು ನಮ್ಮ ಭೂಮಿಯ -ಲವತ್ತತೆಯನ್ನು ಕಡಿಮೆ ಮಾಡಿಕೊಂಡಿದ್ದೇವೆ. ಈಗ ಅದನ್ನು ಸರಿಪಡಿಸುವ ಜವಾಬ್ದಾರಿಯೂ ರೈತರ ನಮ್ಮ ಹೆಗಲ ಮೇಲೆಯೇ ಇದೆ ಎಂದರು

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯ ಕುಲಪತಿ ಜಗದೀಶ್, ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ನಾಗರಾಜ್ ಅಡಿವೆಪ್ಪನವರ್, ಬಸವರಾಜಪ್ಪ, ವಿಶ್ವಾಸ್, ನಾಗರಾಜ್, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಕಮಲಮ್ಮ ಇತರರು ಉಪಸ್ಥಿತರಿದ್ದರು.

ಕಲಾ ದಸರಾಗೆ ಜಿಲ್ಲಾಧಿಕಾರಿ ಚಾಲನೆ:

ಶಿವಮೊಗ್ಗದ ಶಿವಪ್ಪನಾಯಕ ಅರಮನೆಯಲ್ಲಿ ಕಲಾ ದಸರಾಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಚಾಲನೆ ನೀಡಿದರು.

ಶಿವಮೊಗ್ಗದ ಛಾಯಾಗ್ರಾಹಕರು ತೆಗೆದ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಛಾಯಾಚಿತ್ರಗಳನ್ನು ವೀಕ್ಷಿಸಿದರು.

ಅರಮನೆಯ ಮೇಲ್ಭಾಗದಲ್ಲಿ ಪೇಂಟಿಂಗ್ ಪ್ರದರ್ಶನ ಮಾಡಲಾಗಿದೆ. ಅರಮನೆ ಅವರಣದಲ್ಲಿ ರಾಧಿಕಾ ಜಗದೀಶ್ ಅವರು ದಸರಾ ಬೊಂಬೆಗಳ ಪ್ರದರ್ಶಿಸಿದ್ದಾರೆ. ಇದೇ ಮೊದಲ ಬಾರಿ ಗೊಂಬೆ ಪ್ರದರ್ಶನ ಮಾಡಲಾಗಿದೆ. ಪಟ್ಟದ ಗೊಂಬೆ, ಅರಿಷಿಣ ಕುಟ್ಟಿವ ಗೊಂಬೆ, ಅರಮನೆ, ಅಂಬಾರಿ, ಚನ್ನಪಟ್ಟಣ ಗೊಂಬೆಗಳು, ದಶಾವತಾರ, ಅಷ್ಟಲಕ್ಷ್ಮಿ , ನವದುರ್ಗೆ, ರಾಮಮಂದಿರ, ಕಾಡು, ವನ್ಯಜೀವಿಗಳು, ಪ್ರಾಣಿಗಳ ರಕ್ಷಣೆ, ಫೈಬರ್ ಸರ್ಪವನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ದಸರಾ ಅಂದರೆ ಮೈಸೂರಿನ ಬಗ್ಗೆ ಮಾತ್ರ ಚರ್ಚೆಯಾಗುತ್ತದೆ. ಶಿವಮೊಗ್ಗ ದಸರಾ ಸಹ ಅತ್ಯಂತ ವಿಭಿನ್ನವಾಗಿ, ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರವಾಸೋದ್ಯಮ ದಿನದ ಹಿನ್ನೆಲೆ ಛಾಯಾಚಿತ್ರ ಪ್ರದರ್ಶಿಸಲಾಗುತ್ತಿದೆ. ಮಕ್ಕಳು ಹೆಚ್ಚಾಗಿ ಉತ್ಸವದಲ್ಲಿ ಭಾಗವಹಿಸಬೇಕು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮೈಸೂರು ದಸರಾ ಬಳಿಕ ಶಿವಮೊಗ್ಗ ದಸರಾ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಮುಂದೆ ಮತ್ತಷ್ಟು ಯಶಸ್ವಿಯಾಗಿ ನಡೆಯಲಿದೆ. ದೈವ ಇಚ್ಛೆಯಿಂದ ನಾನು ನಾಲ್ಕನೇ ದಸರಾದಲ್ಲಿ ಭಾಗಿಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುಜೀಬ್ ಸೇರಿದಂತೆ ಹಲವರು ಇದ್ದರು.

ನಗರದಲ್ಲಿ ಗಜಪಡೆ ತಾಲೀಮು

ಶಿವಮೊಗ್ಗ ದಸರಾದಲ್ಲಿ ನಡೆಯುವ ಜಂಬೂ ಸವಾರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಕ್ರೆಬೈಲು ಆನೆ ಬಿಡಾರದ ಗಜ ಪಡೆ ಶಿವಮೊಗ್ಗಕ್ಕೆ ಆಗಮಿಸಿದ್ದು, ಗುರುವಾರ ಗಜಪಡೆಗೆ ಮೊದಲ ಸುತ್ತಿನ ತಾಲೀಮು ನಡೆಸಲಾಯಿತು.

ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿವೆ. ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಶಾಲಾ ಅವರಣದಲ್ಲಿ ಆನೆಗಳು ತಂಗಲು ವ್ಯವಸ್ಥೆ ಮಾಡಲಾಗಿದ್ದು, ಆನೆಗಳನ್ನು ಹತ್ತಿರದಿಂದ ನೋಡಲು ಜನರು ಶಾಲೆಯತ್ತ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಈ ಮೊದಲು ಆನೆಗಳು ಉಳಿಯುವ ಜಾಗದ ಸುತ್ತಲು ಹಸಿರು ಪರದೆ ಹಾಕಲಾಗಿತ್ತು. ಆನೆಗಳು ಬರುತ್ತಿದ್ದಂತೆ ಈ ಪರದೆ ತೆಗೆದು ಜನರು ಆನೆಗಳನ್ನು ಕಣ್ತುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ