ಶಿವಮೊಗ್ಗ ಬಿಷಪ್‌ಗೆ ಘೇರಾವ್‌ ವೇಳೆ ತಳ್ಳಾಟ: ನಾಲ್ವರಿಗೆ ಗಾಯ

KannadaprabhaNewsNetwork | Published : Feb 23, 2025 12:30 AM

ಸಾರಾಂಶ

ಸ್ಥಳೀಯ ಬಸಲಿಕಾ ಚರ್ಚ್ ದೇಣಿಗೆ, ಮರಿಯಾ ಸದನ ಹಾಲ್ ಬಾಡಿಗೆ, ಮರಿಯಾ ನಿವಾಸ ಶಾಲೆ ಮುಂತಾದ ಹಣದ ದುರುಪಯೋಗ ನಡೆಯುತ್ತಿದೆ, ಚರ್ಚ್‌ಗೆ ಸೇರಿದ ಭೂಮಿ ಪರಭಾರೆಯಾಗಿದೆ ಎಂದು ಆರೋಪಿಸಿ, ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರಿಗೆ ಸ್ಥಳಿಯ ಚರ್ಚ್‌ ಭಕ್ತರು ಘೇರಾವು ಹಾಕಲು ಪ್ರಯತ್ನಿಸಿದ್ದು, ಈ ವೇಳೆ ನೂಕಾಟ, ತಳ್ಳಾಟದಿಂದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

- ಹರಿಹರದಲ್ಲಿಕ್ಕೆ ಆಗಮಿಸಿದ್ದ ವೇಳೆ ಚರ್ಚ್‌ ಲೆಕ್ಕಪತ್ರ ವಿವರಕ್ಕಾಗಿ ಆಗ್ರಹ ।

- ಚರ್ಚ್‌ ಪಾಲನಾ ಪರಿಷತ್ತು ಸದಸ್ಯರಿಂದ ಪ್ರತಿಭಟನೆ

- - - - ಬಸಲಿಕಾ ಚರ್ಚ್ ದೇಣಿಗೆ, ಮರಿಯಾ ಸದನ ಹಾಲ್ ಬಾಡಿಗೆ, ಮರಿಯಾ ನಿವಾಸ ಶಾಲೆ ಮುಂತಾದ ಹಣದ ದುರುಪಯೋಗ; ಆರೋಪ

- ಫಾದರ್ ಕೆ.ಎ. ಜಾರ್ಜ್‌ ಅಧಿಕಾರ ವಹಿಸಿಕೊಂಡಾಗಿನಿಂದ ಚರ್ಚ್‌ನ ಲೆಕ್ಕಪತ್ರ ವಿವರ ನೀಡಿಲ್ಲ ಎಂದು ಆರೋಪ

- ಹೆದ್ದಾರಿಗೆ ಜಮೀನು ಸ್ವಾಧೀನದ ಪರಿಹಾರದ ಯಾರ ಖಾತೆಗೆ, ಎಷ್ಟು ಜಮಾ ಆಗಿದೆ ಎಂದು ಪ್ರಶ್ನೆ

- ಉಳಿದ 2 ಎಕರೆ ಜಮೀನು ಯಾರ ಹೆಸರಿನಲ್ಲಿದೆ ಎಂಬುದಕ್ಕೆ ಉತ್ತರ ನೀಡುವಂತೆ ಭಕ್ತರ ಪಟ್ಟು - - - ಕನ್ನಡಪ್ರಭ ವಾರ್ತೆ ಹರಿಹರ ಸ್ಥಳೀಯ ಬಸಲಿಕಾ ಚರ್ಚ್ ದೇಣಿಗೆ, ಮರಿಯಾ ಸದನ ಹಾಲ್ ಬಾಡಿಗೆ, ಮರಿಯಾ ನಿವಾಸ ಶಾಲೆ ಮುಂತಾದ ಹಣದ ದುರುಪಯೋಗ ನಡೆಯುತ್ತಿದೆ, ಚರ್ಚ್‌ಗೆ ಸೇರಿದ ಭೂಮಿ ಪರಭಾರೆಯಾಗಿದೆ ಎಂದು ಆರೋಪಿಸಿ, ಶನಿವಾರ ಸಂಜೆ ನಗರಕ್ಕೆ ಆಗಮಿಸಿದ್ದ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಅವರಿಗೆ ಸ್ಥಳಿಯ ಚರ್ಚ್‌ ಭಕ್ತರು ಘೇರಾವು ಹಾಕಲು ಪ್ರಯತ್ನಿಸಿದ್ದು, ಈ ವೇಳೆ ನೂಕಾಟ, ತಳ್ಳಾಟದಿಂದ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಬಿಷಪ್ ಫ್ರಾನ್ಸಿಸ್ ಸೆರಾವೋ ನಗರದ ಚರ್ಚಗೆ ಆಗಮಿಸಿದ್ದರು. ಈ ವೇಳೆ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಚರ್ಚ್‌ ಪಾಲನಾ ಪರಿಷತ್ತು ಸದಸ್ಯರು, ಮುಖಂಡರು ಸಮಾಜದ ಸಾರ್ವಜನಿಕರು ಒತ್ತಾಯಿಸಿ, ಪ್ರತಿಭಟನೆಗೆ ಮುಂದಾದರು.

ಆರೋಗ್ಯಸ್ವಾಮಿ, ಮುನಿದಾಸ ಸ್ವಾಮಿ, ಜರ್ಸಿ ಕುಮಾರ್, ಕುಮಾರ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಆರೋಗ್ಯಸ್ವಾಮಿ ಸುರೇಶ ಕುಮಾರ ಮಾತನಾಡಿ, ಈ ಚರ್ಚ್‌ಗೆ ದೇಶ, ರಾಜ್ಯದ ಹಲವಾರು ಜಿಲ್ಲೆಗಳಿಂದ ನಿತ್ಯ ಜಾತಿ-ಮತ ಭೇಧವಿಲ್ಲದೇ ಹಲವಾರು ಭಕ್ತರು ಬರುತ್ತಾರೆ. ಇದೊಂದು ಪವಿತ್ರ ಧರ್ಮ ಕ್ಷೇತ್ರವಾಗಿದೆ. ಇಂಥ ಪವಿತ್ರ ಧರ್ಮಕ್ಷೇತ್ರಕ್ಕೆ ಫಾದರ್ ಕೆ.ಎ. ಜಾರ್ಜ್‌ ಕಳೆದ 2 ವರ್ಷಗಳಿಂದ ಧರ್ಮಾಧಿಕಾರಿ ಆಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಚರ್ಚ್‌ನ ಲೆಕ್ಕಪತ್ರದ ವಿವರವನ್ನು ಚರ್ಚ್‌ ಪಾಲನಾ ಸಮಿತಿಗಾಗಲಿ, ಕ್ರೈಸ್ತ ಸಮುದಾಯದವರಿಗಾಗಲಿ ನೀಡಿಲ್ಲ. ಈ ಬಗ್ಗೆ ಶಿವಮೊಗ್ಗದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಲೆಕ್ಕಪತ್ರ ನೀಡುತ್ತಿಲ್ಲ ಎಂದು ದೂರಿದರು.

ಈ ಹಿಂದೆ ಫಾದರ್ ಆಗಿದ್ದ ಜೆ.ಆರ್. ನಾದನ್ ಅವಧಿಯಲ್ಲಿ ಧರ್ಮ ಕೇಂದ್ರ ಮತ್ತು ಶಿಕ್ಷಣ ಸಂಸ್ಥೆ ಆರಂಭಿಸುವುದಕ್ಕಾಗಿ ನಗರದ ಹೊಸ ನ್ಯಾಯಾಲಯದ ಸಮೀಪ, ಹಳೆಯ ಎನ್.ಎಚ್-4 ರಸ್ತೆಯ ಪಕ್ಕದಲ್ಲಿ, ಧರ್ಮದ ಬಡವರ ಕಲ್ಯಾಣಕ್ಕಾಗಿ 4 ಎಕರೆ 19 ಗುಂಟೆ ಜಮಿನನ್ನು ಖರೀದಿಸಿದ್ದರು. ಫಾದರ್ ಎಸ್.ಆರ್. ಪೀಟರ್ ಅವಧಿಯಲ್ಲಿ ನೋಂದಾವಣಿಯಾಗಿದೆ. ಅದರಲ್ಲಿ 1 ಎಕರೆ 19 ಗುಂಟೆ ಜಮೀನನ್ನು ಫಾದರ್ ವಿಕ್ಟರ್ ಫಾಯಶ್ ಅವರ ಹೆಸರಿಗೆ ಬರೆಯಲಾಗಿತ್ತು. ಸರ್ಕಾರ ಹೆದ್ದಾರಿಗೆ ಜಮೀನು ಸ್ವಾಧೀನಪಡಿಸಿಕೊಂಡ ಮೇಲೆ ನೀಡಿದ ಪರಿಹಾರದ ಎಷ್ಟು ಹಣ, ಯಾರ ಖಾತೆಗೆ, ಎಷ್ಟು ಜಮಾ ಆಗಿದೆ, ಉಳಿದ 2 ಎಕರೆ ಜಮೀನು ಯಾರ ಹೆಸರಿನಲ್ಲಿದೆ ಎನ್ನುವ ಬಗ್ಗೆ ಧರ್ಮ ಕೇಂದ್ರದ ಆರ್ಥಿಕ ಸಮಿತಿಗಾಗಲಿ, ಪಾಲನಾ ಪರಿಷತ್ತಿಗಾಗಲಿ, ಅಥವಾ ಸಮಾಜದ ಜನರಿಗಾಗಲಿ ತಿಳಿಸಿಲ್ಲ ಎಂದು ಕಿಡಿಕಾರಿದರು.

ಚರ್ಚ್ ನವೀಕರಣ ಮತ್ತು ದುರಸ್ತಿಗಾಗಿ ಸುಮಾರು ₹20 ಲಕ್ಷದಿಂದ ರಿಂದ ₹22 ಲಕ್ಷವನ್ನು ನೀಡಿದ ಬಗ್ಗೆ ಮಾಹಿತಿ ಇದೆ. ದುರಸ್ತಿ ಮತ್ತು ನವೀಕರಣಕ್ಕಾಗಿ ಅನೇಕ ದಾನಿಗಳು ಸಿಮೆಂಟ್ ಮತ್ತಿತರೆ ಸಾಮಗ್ರಿಗಳನ್ನು ನೀಡಿರುವ ಮಾಹಿತಿ ಇದೆ. ಹಳೆಯ ಚರ್ಚ್‌ ದುರಸ್ತಿ ಮತ್ತು ನವೀಕರಣಕ್ಕಾಗಿ ಸಂಗ್ರಹವಾದ ಹಣದ ಬಗ್ಗೆ ಲೆಕ್ಕಾಚಾರ ಜನರಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರೂ, ಯಾವುದೇ ಮಾಹಿತಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೇ, ಚರ್ಚ್‌ ಆವರಣದಲ್ಲಿರುವ ಗುರು (ಫಾದರ್) ನಿವಾಸದಲ್ಲಿ ಒಂದು ಹಿಂದೂ ಕುಟುಂಬ ನೆಲಸಿದೆ. ಆ ಕುಟುಂಬದ ಹೆಣ್ಣುಮಕ್ಕಳು ಯಾವುದೇ ಅಡೆತಡೆ ಇಲ್ಲದೇ ಗುರು ನಿವಾಸದಲ್ಲಿ ಓಡಾಡಿಕೊಂಡು ಇರುತ್ತಾರೆ. ಇದು ನಮ್ಮ ಸಂಸ್ಕೃತಿಗೆ ವಿರೋಧವಾಗಿದೆ. ಇದರಿಂದ ಚರ್ಚ್‌ ಹೆಸರು ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾರೆನ್ಸ್, ಅಗಷ್ಟಿನ್, ಜೋಸೆಫ್‌ ಕುಮಾರ, ಆರ್.ಎನ್. ಜಾನ್, ಫ್ರಾನ್ಸಿಸ್ ಜೆ., ರಾಜಣ್ಣ, ಅಲ್ಬರ್ಟ್‌, ಆ್ಯಂಟಿನಿ ಕ್ರೋಷ್, ವಿನೋದ್‍ ರಾಜನ್ ಹಾಗೂ ಇತರರು ಪ್ರತಿಭಟನೆಗೆ ಸಾಥ್‌ ನೀಡಿದರು.

- - - -22ಎಚ್.ಆರ್.ಆರ್01:

ಹರಿಹರದ ಬಸಲಿಕಾ ಆರೋಗ್ಯ ಮಾತೆಯ ಚರ್ಚ್‌ನಲ್ಲಿ ಶನಿವಾರ ಬಿಷಪ್ ಅವರಿಗೆ ಘೇರಾವ್ ವೇಳೆ ತಳ್ಳಾಟ ನೂಕಾಟ ನಡೆಯಿತು.

- - -

ಬಾಕ್ಸ್‌ * ಜಮಾ ಖರ್ಚಿನ ಮಾಹಿತಿ ಮಂಡಿಸುತ್ತೇವೆ: ಬಿಷಪ್‌ ಹರಿಹರ ನಗರಕ್ಕೆ ಆಗಮಿಸಿದ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮಲ್ಲಿ ವಿವಿಧ ಸಮಿತಿಗಳಿವೆ. ನಮ್ಮ ರೀತಿಯ ಪ್ರಕಾರ ಆರ್ಥಿಕ ಸಮಿತಿಯಲ್ಲಿ ಮಾತ್ರ ಜಮಾ ಖರ್ಚಿನ ಮಾಹಿತಿ ಮಂಡಿಸುತ್ತೇವೆ. ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ ಎಂದರು.

ಚರ್ಚ್‌ ಹೆಸರಿನಲ್ಲಿ ಯಾವುದೇ ಆಸ್ತಿಗಳನ್ನು ರಿಜಿಸ್ಟರ್ ಮಾಡಿಸುವುದಿಲ್ಲ. ರೈತರೊಬ್ಬರ ಹೆಸರಿನಲ್ಲಿ ಜಮೀನುಗಳನ್ನು ರಿಜಿಸ್ಟರ್ ಮಾಡಿಸುತ್ತೇವೆ. ಉಳಿದಂತೆ ಬಡ ಹಿಂದೂ ಕುಟುಂಬವೊಂದಕ್ಕೆ ಇಲ್ಲಿನ ಅಡುಗೆ ಕೆಲಸಗಳಿಗೆ ನೇಮಕ ಮಾಡಲಾಗಿದೆ. ಬಡ ಕುಟುಂಬಗಳಿಗೆ ಸಾಧ್ಯವಾದಷ್ಟು ಅಥವಾ ಉಚಿತ ಶಿಕ್ಷಣ ನೀಡುತೇವೆ ಎಂದರು.

ಈ ಸಂದರ್ಭ ಫಾದರ್ ಕೆ.ಎ. ಜಾರ್ಜ್‌ ಹಾಗೂ ಇತರರು ಇದ್ದರು.

- - - -22ಎಚ್.ಆರ್.ಆರ್01:

ಹರಿಹರದಲ್ಲಿ ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ಮಾಧ್ಯಕ್ಷ ಬಿಷಪ್ ಫ್ರಾನ್ಸಿಸ್ ಸೆರಾವೊ ಪತ್ರಕರ್ತರೊಂದಿಗೆ ಮಾತನಾಡಿದರು.

Share this article